oppo_2 
ಜಿಲ್ಲೆ

ಅಂಗನವಾಡಿ ನೇಮಕದಲ್ಲಿ ವಿಳಂಬ

ಕಲಬುರಗಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ೨೦೨೩-೨೪ನೇ ಸಾಲಿನಲ್ಲಿ ಅಧಿಸೂಚನೆ ಹೊರಡಿಸಿ, ಜಿಲ್ಲಾದ್ಯಂತ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ನೇಮಿಸಲಾಗಿದೆ. ಆದರೆ ಅದೇ ಅಧಿಸೂಚನೆಯಲ್ಲಿರುವ ಆಳಂದ ತಾಲೂಕಿನ ನೇಮಕವನ್ನು ವಿನಾಕಾರಣ ವಿಳಂಬ ಮಾಡಿ, ಅನ್ಯಾಯ ಮಾಡಲಾಗುತ್ತಿದೆ ಎಂದು ಅರ್ಜಿ ಸಲ್ಲಿಸಿದ ವಿಜಯಲಕ್ಷಿಕ್ಷ್ಮೀ ಕೆ.ಆರೋಪಿಸಿದರು.

ನಿಯಮದ ಪ್ರಕಾರ ಅರ್ಜಿ ಸಲ್ಲಿಸಿದ್ದು, ಎಲ್ಲ ತಾಲೂಕುಗಳಲ್ಲಿ ಆಯ್ಕೆಯಾಗಿದೆ. ಆದರೆ ಆಳಂದ ತಾಲೂಕಿನಲ್ಲಿ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ತಡೆ ಹಿಡಿದು, ಅನ್ಯಾಯ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಆಳಂದ ಶಿಶು ಅಭಿವೃದ್ಧಿ ಅಧಿಕಾರಿ ಇನ್ನೊಮ್ಮೆ ಅರ್ಜಿ ಕರೆಯುತ್ತೇನೆ ಎನ್ನುತ್ತಾರೆ. ಕಾರಣವಿಲ್ಲದೆ ಹೀಗೆ ಮಾಡಲಾಗುತ್ತಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡರು.

ಪುನಃ ಅರ್ಜಿ ಕರೆದರೆ ಈಗಾಗಲೇ ಅರ್ಜಿ ಸಲ್ಲಿಸಿದವರಲ್ಲಿ ಬಹುತೇಕರಿಗೆ ವಯೋಮಿತಿ ಮೀರಿ ಹೋಗಿದೆ. ಆದ್ದರಿಂದ ಹಳೇ ಅರ್ಜಿ ಸಲ್ಲಿಸಿದವರನ್ನು ನೇಮಕ ಮಾಡಿಕೊಳ್ಳಬೇಕು. ಶಾಸಕ ಬಿ.ಆರ್.ಪಾಟೀಲ್ ತಡೆ ಹಿಡಿಯಿರಿ ಎಂದು ಪತ್ರ ಬರೆದಿದ್ದಾರೆಂದು ಅಧಿಕಾರಿಗಳು ತಿಳಿಸುತ್ತಾರೆ. ಯಾರು ಏನೇ ಹೇಳಲಿ ಕಾರಣ ನೀಡಲಿ. ಅದನ್ನು ಬಿಟ್ಟು ತಾಲೂಕು ಅಧಿಕಾರಿಗಳು ಮೇಲಾಧಿಕಾರಿಗಳಿಗೆ ಪತ್ರ ಬರೆದು ದಾರಿ ತಪ್ಪಿಸುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಡಾ.ಗೋರಖನಾಥ ದೊಡ್ಡಮನಿ ಆರೋಪಿಸಿದರು.

ಆಯ್ಕೆಗೆ ಜಿಲ್ಲಾ ಸಮಿತಿ ಇದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ದೂರು ನೀಡಿದ್ದರೂ ಸ್ಪಂದನೆ ದೊರಕಿಲ್ಲ. ಆದ್ದರಿಂದ ಹಂತ ಹಂತವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಮೇ ೨೧ರಂದು ಜಿಲ್ಲಾ ಉಪ ನಿರ್ದೇಶಕರ ಕಚೇರಿ ಎದುರು ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಭಾಗ್ಯಶ್ರೀ ಎ., ಸೃಷ್ಟಿ ಆರ್., ಪ್ರತಿಭಾ ಗೋರಖನಾಥ, ಶೋಭಾ ಶರಣಪ್ಪ, ಮಹಾದೇವಿ ಶಂಕ್ರೆಪ್ಪ, ರೂಪಾ ಜಿ ಇತರರಿದ್ದರು.