ಮೈಸೂರು: ಗ್ರಾಚ್ಯುಯಿಟಿ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು, ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಹಗಲಿರುಳು ದುಡಿಯುತ್ತಿದ್ದಾರೆ. 46 ವರ್ಷಗಳಿಂದ ಕೆಲಸದ ಭದ್ರತೆ ಇಲ್ಲ. ಕನಿಷ್ಠ ವೇತನವೂ ದೊರೆಯುತ್ತಿಲ್ಲ ಜತೆಗೆ, ಸಾಮಾಜಿಕ ಯೋಜನೆಗಳಾದ ಪಿಂಚಣಿ, ಭವಿಷ್ಯನಿಧಿ, ಗ್ರಾಚ್ಯುಯಿಟಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ತಾಲೂಕು, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೋರಾಟ ನಡೆಸಿದರೂ ಕೇಂದ್ರ, ರಾಜ್ಯ ಸರ್ಕಾರಗಳು ಸ್ಪಂದಿಸುತ್ತಿಲ್ಲ. ಮಹಿಳಾ ವಿರೋಧಿ ನಿಲುವು ಪ್ರದರ್ಶಿಸುತ್ತಿವೆ ಎಂದು ಕಿಡಿಕಾರಿದರು.
ಅಂಗನವಾಡಿ ಕಾರ್ಯಕರ್ತೆಯರು ಗ್ರಾಚ್ಯುಯಿಟಿಗೆ ಅರ್ಹರು ಎಂದು ಸುಪ್ರೀಂ ಕೋರ್ಟ್ 2020ರ ಏಪ್ರಿಲ್ 25ರಂದು ತೀರ್ಪು ನೀಡಿದೆ. ಆದ್ದರಿಂದ 1972ರ ಗ್ರಾಚ್ಯುಯಿಟಿ ಕಾಯ್ದೆ ಅನ್ವಯ ಈ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಬೇಡಿಕೆಗಳು ಏನು?
ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಅಂಗನವಾಡಿ ಕೇಂದ್ರಗಳಲ್ಲಿಯೇ ಆರಂಭಿಸಬೇಕು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೂ ವೈದ್ಯಕೀಯ ಪರಿಹಾರಧನ ನೀಡಬೇಕು. ಮಿನಿ ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿಯರನ್ನು ತುರ್ತಾಗಿ ನೇಮಕಾತಿ ಮಾಡಬೇಕು. ತೀವ್ರತರ ಆರೋಗ್ಯ ಪೀಡಿತ ಅಶಕ್ತರಿಗೆ ಪರಿಹಾರ ನೀಡಿ ನಿವೃತ್ತಿಗೊಳಿಸಬೇಕು. ಮೊಬೈಲ್ ಬಳಕೆಯ ಸಮಸ್ಯೆ ಸರಿಪಡಿಸಬೇಕು. ಪ್ರಭಾರ ಭತ್ಯೆ ಹೆಚ್ಚಳ ಮಾಡಬೇಕು. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಮಹಾರಾಷ್ಟ್ರ ಮಾದರಿಯಲ್ಲಿ ಗಣೇಶ, ಯುಗಾದಿ ಹಬ್ಬಕ್ಕೆ ಬೋನಸ್ ನೀಡಬೇಕು ಎಂದು ಆಗ್ರಹಿಸಿದರು
ಸಂಘದ ರಾಜ್ಯ ಮಂಡಳಿ ಸದಸ್ಯ ಡಿ.ಜಗನ್ನಾಥ, ಸ್ಥಳೀಯ ಮುಖಂಡರಾದ ಗೀತಾ, ಗಿರಿಜಾ, ಭಾಗ್ಯಾ, ವೈ.ಮಹದೇವಮ್ಮ, ಭುವನೇಶ್ವರಿ ಸೇರಿದಂತೆ ನೂರಾರು ಕಾರ್ಯಕರ್ತೆಯರು ಇದ್ದರು.