ರಿಪ್ಪನ್‌ಪೇಟೆ: ರಾಜ್ಯಾದ್ಯಂತ ಬಡ ಮತ್ತು ಮಧ್ಯಮ ವರ್ಗದ ಹೆಣ್ಣುಮಕ್ಕಳೇ ಅಂಗನವಾಡಿ ಕಾರ್ಯಕರ್ತರಾಗಿ ದುಡಿಯುತ್ತಿದ್ದಾರೆ. ಆದರೆ ಅವರ ಶ್ರಮಕ್ಕೆ ತಕ್ಕದಾದ ಪ್ರತಿಫಲ ಲಭಿಸುತ್ತಿಲ್ಲ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.
ಶನಿವಾರ ಪಟ್ಟಣದಲ್ಲಿ ಆಯೋಜಿಸಿದ್ದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ದಿನಾಚರಣೆ ಹಾಗೂ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕನಿಷ್ಠ ಗೌರವಧನಕ್ಕಾಗಿ ಕೆಲಸ ನಿರ್ವಹಿಸುತ್ತಿರುವ ಕಾರ್ಯಕರ್ತೆಯರ ಬದುಕು ಕಠಿಣವಾಗಿದೆ. ತಮ್ಮ ಜೀವನ ನಿರ್ವಹಣೆಗಾಗಿ ಅನಿವಾರ್ಯವಾಗಿ ವೃತ್ತಿಯನ್ನು ಅರಸಿಕೊಂಡಿದ್ದರೂ ಪ್ರಾಮಾಣಿಕತೆಯಿಂದ ನಿರ್ವಹಿಸುತ್ತಿದ್ದಾರೆ ಎಂದರು.
ಕೀಟಲೆ ಮಾಡುವ ಮಕ್ಕಳನ್ನು ಸರಿದಾರಿಗೆ ತರುವ ನಿಮ್ಮ ಸೇವೆ ನಿಜವಾಗಿಯು ಅವಿಸ್ಮರಣೀಯ. ನಿಮಗೆ ಗೌರವ ನೀಡಲಾಗುತ್ತಿದೆ, ಆದರೆ ಸೂಕ್ತ ವೇತನ ನೀಡಲಾಗುತ್ತಿಲ್ಲ. ಸದಾ ಕಾಲ ನಿಮ್ಮ ಜತೆ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಹಾಗೂ ನಾನು ಇರುತ್ತೇವೆ. ನಿಮ್ಮ ಬೇಡಿಕೆಗಳನ್ನು ಸದನದಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದು, ನ್ಯಾಯ ಒದಗಿಸಿಕೊಡುತ್ತೇವೆ ಎಂದು ಭರವಸೆ ನೀಡಿದರು.