ಜಿಲ್ಲೆ

ಅಂಗನವಾಡಿ, ಆಶಾ ಸ್ವಸಹಾಯ ಗುಂಪು

Kalaburagi

ಕಲಬುರಗಿ: ಕರೊನಾ ನಿಯಂತ್ರಣದಲ್ಲಿ ಮುಂಚೂಣಿ ಪಾತ್ರ ವಹಿಸಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಆರ್ಥಿಕವಾಗಿ ಸಬಲಗೊಳಿಸಲು ಸ್ವಸಹಾಯ ಗುಂಪುಗಳನ್ನು ರಚಿಸಿ ಡಿಸಿಸಿ ಬ್ಯಾಂಕ್ ಮೂಲಕ ಸಾಲ ನೀಡುವ ಮೂಲಕ ನೆರವು ನೀಡುವುದಾಗಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಪ್ರಕಟಿಸಿದರು.
ಸಹಕಾರ ಇಲಾಖೆ, ವಿವಿಧ ಸಹಕಾರ ಸಂಸ್ಥೆಗಳ ಸಹಯೋಗದಲ್ಲಿ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಆಶಾ ಕಾರ್ಯಕರ್ತೆಯರಿಗೆ ತಲಾ 3000 ರೂ. ಪ್ರೋತ್ಸಾಹಧನ ಚೆಕ್ ವಿತರಿಸಿ, ಆಶಾಗಳಿಗೆ ಪುಷ್ಪವೃಷ್ಟಿ ಮೂಲಕ ಗೌರವಿಸಿ ಮಾತನಾಡಿ, ಈ ನಿಟ್ಟಿನಲ್ಲಿ 21 ಡಿಸಿಸಿ ಬ್ಯಾಂಕ್ಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಬ್ಯಾಂಕಿನ ಅನುದಾನದಲ್ಲಿ ಸ್ವಲ್ಪ ಭಾಗ ಸ್ವಸಹಾಯ ಸಂಘಗಳಿಗೆ ಸಾಲದ ರೂಪದಲ್ಲಿ ನೆರವು ನೀಡಲು ಮೀಸಲಿಡಲಾಗುವುದು. ಇದರಿಂದ ಆರ್ಥಿಕ ಚಟುವಟಿಕೆ ನಡೆಸಲು ಸಹಕಾರಿಯಾಗಲಿದೆ ಎಂದರು.
ಕಲಬುರಗಿ ಜಿಲ್ಲೆಯಲ್ಲಿ 1840 ಸೇರಿ ರಾಜ್ಯದಲ್ಲಿ 46,680 ಆಶಾ ಕಾರ್ಯಕರ್ತೆಯರಿದ್ದಾರೆ. ಅವರಿಗೆ ತಲಾ 3 ಸಾವಿರ ರೂ. ಪ್ರೋತ್ಸಾಹ ಧನವನ್ನು ಲಾಭದಲ್ಲಿರುವ ಸಹಕಾರ ಸಂಸ್ಥೆಗಳಿಂದ ದೇಣಿಗೆ ಪಡೆದು ವಿತರಿಸಲಾಗುತ್ತಿದೆ. ಬಡವರ ಬಂಧು ಯೋಜನೆಯಡಿ ಸಾಲ ನೀಡಿಕೆ ಆರಂಭಿಸಲಾಗಿದೆ. ರೈತರಿಗೂ ಸಾಲ ವಿತರಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಬಾಬುರಾವ ಚಿಂಚನಸೂರ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಸವರಾಜ ವಾಲಿ, ಎಪಿಎಂಸಿ ಅಧ್ಯಕ್ಷ ಗುರುಬಸಪ್ಪ ಕಣಕಿ, ಶಾಸಕರಾದ ಡಾ.ಅವಿನಾಶ ಜಾಧವ್, ತಿಪ್ಪಣ್ಣಪ್ಪ ಕಮಕನೂರ, ಜಿಪಂ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣ ಮಲಾಜಿ, ಡಿಸಿಸಿ ಬ್ಯಾಂಕ್ ನಿದರ್ೇಶಕ ಸೋಮಶೇಖರ ಗೋನಾಯಕ, ಸೌಹಾರ್ದ ಸಹಕಾರಿಗಳ ಸಂಘದ ಉಪಾಧ್ಯಕ್ಷ ಸಂಜೀವ ಮಹಾಜನ್, ಜಿಪಂ ಸದಸ್ಯ ಅರವಿಂದ ಚವ್ಹಾಣ್, ನರ್ಸಿಂಗ್ ಕೌನ್ಸಿಲ್ ಸದಸ್ಯೆ ದಿವ್ಯಾ ಹಾಗರಗಿ, ಸಹಕಾರ ಸಂಘಗಳ ರಾಯಚೂರು ವಲಯ ನಿಬಂಧಕ ಗೋಪಾಲ ಚವ್ಹಾಣ್ ಇತರರಿದ್ದರು.

ಡಿಸಿಸಿ-ಅಪೆಕ್ಸ್ ಬ್ಯಾಂಕ್ಗೆ ಒಂದೇ ಸಾಫ್ಟ್ವೇರ್
ಡಿಸಿಸಿ ಬ್ಯಾಂಕ್ ಸೇರಿ ಸಹಕಾರ ಬ್ಯಾಂಕುಗಳಲ್ಲಿ ಹಣ ದುರುಪಯೋಗ ಮತ್ತು ಅಕ್ರಮ ತಡೆಯಲು ರಾಜ್ಯದ 21 ಡಿಸಿಸಿ ಬ್ಯಾಂಕ್ ಹಾಗೂ 5400 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸೇರಿ ಇತರ ಸಂಘಗಳಿಗೆ ಹಾಗೂ ಪ್ರಧಾನ ಬ್ಯಾಂಕ್ ಅಪೆಕ್ಸ್ಗೆ ಒಂದೇ ಮಾದರಿ ಸಾಫ್ಟ್ವೇರ್ ರೂಪಿಸಿ ಬಳಸಲಾಗುವುದು ಎಂದು ಸಚಿವ ಸೋಮಶೇಖರ್ ತಿಳಿಸಿದರು. ಈ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಶೀಘ್ರವೇ ಕೆಲಸ ಶುರುವಾಗಲಿದೆ. ಅರ್ಬನ್ ಬ್ಯಾಂಕುಗಳಲ್ಲಿ ಸಾಕಷ್ಟು ಅವ್ಯವಹಾರ ಆಗಿರುವುದನ್ನು ಗಮನಿಸಿ ಆರ್ಬಿಐ ಅಡಿಗೆ ತರಲು ನಿರ್ಧರಿಸಲಾಗಿದೆ. ಅದೇ ಮಾದರಿಯಲ್ಲಿ ಡಿಸಿಸಿ ಇತರ ಬ್ಯಾಂಕ್ಗಳನ್ನು ಅಪೆಕ್ಸ್ ಬ್ಯಾಂಕ್ ಸಾಫ್ಟ್ವೇರ್ಗೆ ಲಿಂಕ್ ಮಾಡುವುದರಿಂದ ವ್ಯವಹಾರ ಪಾರದರ್ಶಕಗೊಳ್ಳಲಿದೆ ಎಂದರು.

ಪುಷ್ಪವೃಷ್ಟಿ ಮಾಡಿ ಆಶಾಗಳಿಗೆ ಗೌರವ
ಕರೊನಾ ಸೇನಾನಿಗಳಾಗಿ ಮಾದರಿ ಕೆಲಸ ಮಾಡಿರುವ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಚೆಕ್ ವಿತರಿಸುವುದರ ಜತೆಗೆ ಪುಷ್ಪವೃಷ್ಟಿ ಮಾಡುವ ಮೂಲಕ ಗೌರವಿಸಲಾಯಿತು. ಸಚಿವ ಸೋಮಶೇಖರ್ ಮಾತನಾಡಿ, ಸಿಎಂ ಸೂಚನೆಯಂತೆ ಆಶಾಗಳಿಗೆ ಸಹಕಾರ ಸಂಘಗಳ ಲಾಭಾಂಶದಲ್ಲಿ ಒಂದಿಷ್ಟು ದೇಣಿಗೆ ಪಡೆದು ತಲಾ 3 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ. ಇದು ಕಡಿಮೆ ಎಂಬುದು ಗೊತ್ತು. ಆದರೆ ಅವರ ಸೇವೆಯನ್ನು ಸ್ಮರಿಸುವುದು ಮುಖ್ಯವಾಗಿದೆ ಎಂದರು. ಮೊದಲ ಹಂತದಲ್ಲಿ ಕಲಬುರಗಿ ಜಿಲ್ಲೆಯ 110 ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಿಸಲಾಗಿದೆ. ಉಳಿದವರಿಗೆ ವಿತರಿಸಲು ತಯಾರಿ ಮಾಡಿಕೊಳ್ಳಲಾಗಿದ್ದು, 10ದಿನಗಳಲ್ಲಿ ವಿತರಿಸಲಾಗುವುದು ಎಂದು ಸಹಕಾರ ಸಂಘಗಳ ಜಂಟಿ ನಿಬಂಧಕ ಗೋಪಾಲ ಚವ್ಹಾಣ್ ಸಚಿವರ ಗಮನಕ್ಕೆ ತಂದರು.