ಜಿಲ್ಲೆ

ಅಂಗನವಾಡಿ ಅವ್ಯವಸ್ಥೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಅಸಮಾಧಾನ

ಮೈಸೂರು: ನಗರದ ಅಂಗನವಾಡಿ ಕೇಂದ್ರ ಹಾಗೂ ಹಾಸ್ಟೆಲ್‌ಗಳಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಇತ್ತೀಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅವ್ಯವಸ್ಥೆ ಕಂಡು ಕೆಂಡಾಮಂಡಲರಾದರು.
ಕೆ.ಜಿ.ಕೊಪ್ಪಲಿನ ಅಂಗನವಾಡಿ ಕೇಂದ್ರ 104ಕ್ಕೆ ಭೇಟಿ ನೀಡಿದಾಗ ತಂಡಕ್ಕೆ ಗರ್ಭಿಣಿ, ಬಾಣಂತಿಯರಿಗೆ ವಿತರಿಸಬೇಕಾದ ಪೌಷ್ಟಿಕ ಆಹಾರ (ಪುಷ್ಟಿ) ವಿತರಿಸದೆ ಕೊಠಡಿಯಲ್ಲಿ ಹಾಗೆಯೇ ಇಟ್ಟಿರುವುದು ಕಂಡು ಬಂತು. ದಾಸ್ತಾನು ಪರಿಶೀಲಿಸಿದಾಗ ಮೊಟ್ಟೆ ಇಲ್ಲದಿರುವುದು, ಮಕ್ಕಳ ಹಾಜರಾತಿ, ಕಾರ್ಯಕರ್ತೆ ನಿವೃತ್ತರಾಗಿದ್ದರೂ ಪ್ರಭಾರ ಸಿಬ್ಬಂದಿ ಸರಿಯಾಗಿ ಅಂಗನವಾಡಿಗೆ ಬಾರದಿರುವುದು ಕಂಡು ಬೇಸರ ವ್ಯಕ್ತಪಡಿಸಿದರು.
ಅಂಗನವಾಡಿ 107ಕ್ಕೆ ಭೇಟಿ ನೀಡಿದಾಗ ಕಾರ್ಯಕರ್ತೆ ಹಾಗೂ ಮಕ್ಕಳೇ ಇರಲಿಲ್ಲ. ಆಹಾರ ಪದಾರ್ಥಗಳ ದಾಸ್ತಾನು, ಮೊಟ್ಟೆ ಪಡೆದುಕೊಂಡಿದ್ದರೂ, ಅವುಗಳ ವಿತರಣೆ ಬಗ್ಗೆ ದಾಖಲೆ ಇರಲಿಲ್ಲ. ವಿಪರ್ಯಾಸ ಎಂದರೆ ಅಂಗನವಾಡಿ ಆವರಣದಲ್ಲಿ ಮದ್ಯದ ಖಾಲಿ ಬಾಟಲಿಗಳು, ಜೂಜಾಟವಾಡಿ ಬಿಸಾಡಿರುವ ಇಸ್ಪೀಟ್ ಎಲೆಗಳು ಬಿದ್ದಿರುವುದು ಅವ್ಯವಸ್ಥೆಗೆ ಸಾಕ್ಷಿಯಾಗಿತ್ತು.
ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಸವರಾಜು ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಆಯೋಗದ ಸದಸ್ಯ ಶಶಿಧರ್ ಕೋಸಂಬೆ, ನಗರದ ಅಂಗನವಾಡಿ ಸ್ಥಿತಿ ಪರಿಶೀಲಿಸಿ ಸಂಬಂಧಪಟ್ಟ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮೇಲ್ವಿಚಾರಕರಿಗೆ ನೋಟಿಸ್ ಜಾರಿ ಮಾಡಿ ಆಯೋಗಕ್ಕೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಊಟಕ್ಕೆ ಕೊಳೆತ ತರಕಾರಿ ಬಳಕೆ: ಪಡುವಾರಹಳ್ಳಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಬಾಲಕಿಯರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದಲ್ಲಿ ಅಡುಗೆ ಮಾಡಲು ಕೊಳೆತ ತರಕಾರಿ ಬಳಕೆ ಮಾಡುತ್ತಿರುವುದು ಕಂಡುಬಂದಿದೆ. ಆಹಾರ ಪದಾರ್ಥಗಳ ದಾಸ್ತಾನಿನಲ್ಲಿಯೂ ಹುಳುಗಳು ಪತ್ತೆಯಾಗಿದ್ದು, ಪದಾರ್ಥಗಳನ್ನು ಲ್ಯಾಬ್ ಪರೀಕ್ಷೆಗೆ ಒಳಪಡಿಸದಿರುವುದು ಕಂಡು ಬಂದಿದೆ. ಶೌಚ, ಅಡುಗೆ ಕೋಣೆಗಳಲ್ಲಿ ಸ್ವಚ್ಛತೆ ಇಲ್ಲ. ಸ್ನಾನಕ್ಕೆ ತಣ್ಣೀರು ಮಾತ್ರ ನೀಡುತ್ತಿರುವ ಬಗ್ಗೆ ವಿದ್ಯಾರ್ಥಿನಿಯರು ಸಮಸ್ಯೆ ತೋಡಿಕೊಂಡರು.
ಈ ಕುರಿತು ಪರಿಶೀಲಿಸಿ ಸಂಬಂಧಪಟ್ಟ ವಾರ್ಡನ್‌ಗೆ ನೋಟಿಸ್ ಜಾರಿಗೊಳಿಸುವಂತೆ, ಆಹಾರ ಪದಾರ್ಥಗಳ ಲ್ಯಾಬ್ ಪರೀಕ್ಷೆ, ಬಿಸಿನೀರಿನ ವ್ಯವಸ್ಥೆಗೆ ಸರ್ಕಾರಕ್ಕೆ ಪತ್ರ ಬರೆಯುವಂತೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಿಗೆ ಕರೆ ಮಾಡಿ ನಿರ್ದೇಶನ ನೀಡಿದರು.
ಜಿಲ್ಲಾ ಮಕ್ಕಳ ಕಲ್ಯಾಣಾಧಿಕಾರಿ ಎನ್.ಟಿ.ಯೋಗೇಶ್ ಇದ್ದರು.