ಜಿಲ್ಲೆ

ಅಂಗಡಿಗೆ ಕಾರು ಡಿಕ್ಕಿ, ವೃದ್ಧೆ ಸಾವು

ಅಕ್ಕಿಆಲೂರ: ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಅಂಗಡಿಗಳ ಮೇಲೆ ಹಾಯ್ದ ಪರಿಣಾಮ ವೃದ್ಧೆಯೊಬ್ಬರು ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಸಮೀಪದ ಬಾಳಂಬೀಡ ಮನೋಹರ ನಗರದಲ್ಲಿ ಶುಕ್ರವಾರ ನಡೆದಿದೆ.

ಕಾರ್​ನಲ್ಲಿ ಪ್ರಯಾಣಿಸುತ್ತಿದ್ದ ಉಮಾ ಹೆಗಡೆ (70) ಮೃತರು. ಪಾದಚಾರಿಗಳಾದ ಮನೋಹರ ನಗರದ ಹನುಮಂತಪ್ಪ ಲಿಂಗದಳ್ಳಿ, ಮಂಜುನಾಥ ಅರಳೇಶ್ವರ ಮತ್ತು ಬಸಪ್ಪ ಕೆಂಚಣ್ಣನವರ ಗಾಯಗೊಂಡವರು.

ಪದ್ಮಾಕರ ಹೆಗಡೆ ಅವರು ಕುಮಟಾದಿಂದ ಅಕ್ಕಿಆಲೂರ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ. ಕಾರು ಪಾದಚಾರಿಗಳ ಮೇಲೆರಗಿ ಹೆದ್ದಾರಿ ಪಕ್ಕದ ಹನುಮಂತಪ್ಪ ರ್ಬಾ, ಸುಭಾಷ ಬಾಳಂಬೀಡ ಎಂಬುವರ ಬೀಡಾ ಅಂಗಡಿಗಳಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಅಂಗಡಿಗಳ ಮುಂಭಾಗದ ಚಾವಣಿಗೆ ಹಾನಿಯಾಗಿದೆ. ತೀವ್ರವಾಗಿ ಗಾಯಗೊಂಡ ಪದ್ಮಾಕರ ಅವರ ಅತ್ತೆ ಉಮಾ ಹೆಗಡೆ ಅವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮೂವರು ಪಾದಚಾರಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.