ಕುಣಿಗಲ್ : ುಟ್‌ಪಾತ್‌ನಲ್ಲಿರುವ ಅಕ್ರಮ ಅಂಗಡಿಗಳ ತೆರವು ಮಾಡುವುದು, ಸಮರ್ಪಕವಾಗಿ ಪಾರ್ಕಿಂಗ್ ವ್ಯವಸ್ಥೆ, ಗಬ್ಬು ನಾರುತ್ತಿರುವ ಚರಂಡಿಗಳು, ಅವೈಜ್ಞಾನಿಕ ಕಸ ವಿಲೇವಾರಿ, 4 ಕೋಟಿ ನೀರಿನ ಕರ ಬಾಕಿ, ರಾಜೀನಾಮೆ ಇಂಗಿತ ವ್ಯಕ್ತಪಡಿಸಿದ ಅಧ್ಯಕ್ಷ ! ಹೀಗೆ ಹಲವು ವಿಷಯಗಳು ಮಂಗಳವಾರ ಪುರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಗ್ರಾಸವಾಗಿದ್ದವು.
ಕೋಟೆಗೆ ಮಾರ್ಗದ ರಸ್ತೆಯ ುಟ್‌ಪಾತ್‌ನಲ್ಲಿರುವ ಅಂಗಡಿಗಳನ್ನು ತೆರವು ಮಾಡುವಂತೆ ಸದಸ್ಯರಾದ ಕೋಟೆನಾಗಣ್ಣ, ಉದಯ್‌ಕುಮಾರ್ ಸಭೆಯ ಆರಂಭದಲ್ಲೇ ಆಗ್ರಹಿಸಿದರು.
ಕೋಟೆ ಪ್ರದೇಶದ ಎರಡೂ ರಸ್ತೆಗಳ ುಟ್‌ಪಾತ್ ಮೇಲೆ ಕೆಲ ವ್ಯಾಪಾರಸ್ಥರು ಹೂ, ಹಣ್ಣು, ತರಕಾರಿ, ಸೋಪ್ಪು ಸೇರಿ ಇತರ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ, ಇದರಿಂದ ನಾಗರಿಕರು, ವೃದ್ದರು ತಿರುಗಾಡಲು ಹಾಗೂ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ, ಹಾಗಾಗಿ ವ್ಯಾಪಾರಿಗಳನ್ನು ಸಂತೇಮೈದಾನಕ್ಕೆ ಸ್ಥಳಾಂತರಿಸಿ ಎಂದರು.
ಸದಸ್ಯ ಮಲ್ಲಿಪಾಳ್ಯ ಶ್ರೀನಿವಾಸ್ ಮಾತನಾಡಿ, ಸಂಚಾರ ಅವ್ಯವಸ್ಥೆ ಕೋಟೆಗೆ ಸೀಮಿತವಾಗಿಲ್ಲ, ಪಟ್ಟಣದಲ್ಲಿ ಸಮರ್ಪಕವಾಗಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ, ಕೆನರಾ ಬ್ಯಾಂಕ್, ಎಸ್‌ಬಿಐ ಬ್ಯಾಂಕ್, ಪರಿಮಳ ಹೋಟೆಲ್, ಮಾರ್ಗವಾಗಿ ಪ್ರವಾಸಿ ಮಂದಿರದವರೆಗೂ ಸವಾರರು ಬೈಕ್‌ಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುತ್ತಾರೆ ಎಂದು ದೂರಿದರು.
ುಟ್‌ಪಾತ್ ಮೇಲಿನ ಅಂಗಡಿಗಳನ್ನು ತೆರವುಗೊಳಿಸಲು ಸಿದ್ಧರಿದ್ದೇವೆ, ಸದಸ್ಯರು ಅಡ್ಡಗಾಲು ಹಾಕಬಾರದು ಎಂದು ಸದಸ್ಯರಿಗೆ ಅಧಿಕಾರಿಗಳು ಟಾಂಗ್ ನೀಡಿದರು, ಇದಕ್ಕೆ ನಮ್ಮ ಹಸ್ತಕ್ಷೇಪವಿರುವುದಿಲ್ಲ ಎಂದು ಸದಸ್ಯರು ಹೇಳಿದರು.
ಸ್ವಚ್ಛತೆ ನಿರ್ವಹಣೆ ವಿಫಲ: ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸ ರಾಶಿ ಬಿದ್ದಿದೆ, ಚರಂಡಿಗಳು ಗಬ್ಬೆದ್ದು ನಾರುತ್ತಿವೆ, ದೊಡ್ಡಪೇಟೆಯ ಅಂಗಡಿ ಹಾಗೂ ಮನೆಯವರು ಕಲುಷಿತ ನೀರನ್ನು ರಸ್ತೆಗೆ ಬಿಡುತ್ತಿದ್ದಾರೆ, ರಸ್ತೆಗಳು ಹಾಳಾಗಿದೆ, ಈ ಬಗ್ಗೆ ಏನು ಕ್ರಮಕೈಗೊಂಡಿದ್ದೀರ ಎಂದು ಸದಸ್ಯರಾದ ರಾಮಣ್ಣ, ಕೋಟೆ ನಾಗಣ್ಣ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು, ಇದಕ್ಕೆ ಉತ್ತರಿಸಿದ ಪುರಸಭೆ ಅಧ್ಯಕ್ಷ ಎಸ್.ಕೆ.ನಾಗೇಂದ್ರ, ಈ ಭಾಗದ 2 ಕಡೆ ಚರಂಡಿ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ, ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದೆಂದು ತಿಳಿಸಿದರು.
4 ಕೋಟಿ ನೀರಿನ ಕರ ಬಾಕಿ: ಪಟ್ಟಣದಲ್ಲಿರುವ 4 ಸಾವಿರ ನಲ್ಲಿಗಳ ನಿರ್ವಹಣೆಗಾಗಿ ಪ್ರತಿ ವರ್ಷ 1.25 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ, ಆದರೆ 25 ರಿಂದ 35 ಲಕ್ಷ ರೂಪಾಯಿ ನಲ್ಲಿ ಕಂದಾಯ ಬರುತ್ತಿದೆ, ಏನು ಕ್ರಮಕೈಗೊಂಡಿದ್ದೀರಾ ಎಂದು ಸದಸ್ಯ ರಂಗಸ್ವಾಮಿ ಪ್ರಶ್ನಿಸಿದರು,
ಶೌಚಗೃಹಕ್ಕೆ ಹಣ ಮೀಸಲಿಡಿ: ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಶೌಚಗೃಹ ನಿರ್ಮಿಸಿಕೊಂಡಿರುವ 156 ಫಲಾನುಭವಿಗಳಿಗೆ 2ನೇ ಕಂತಿನ ಹಣ ನೀಡಿಲ್ಲವಾದ್ದರಿಂದ ಶೌಚಗೃಹಗಳು ಪೂರ್ಣಗೊಂಡಿಲ್ಲ, ಜನರು ಬಯಲು ಆಶ್ರಯಿಸಿದ್ದಾರೆ ಎಂದು ಸದಸ್ಯರಾದ ಮಲ್ಲಿಪಾಳ್ಯ ಶ್ರೀನಿವಾಸ್, ರಂಗಸ್ವಾಮಿ ಆರೋಪಿಸಿದರು,
ತಲಾ 6 ಸಾವಿರ ರೂಪಾಯಿಯಂತೆ ಎಲ್ಲ ಫಲಾನುಭವಿಗಳಿಗೆ ಬಾಕಿ ಹಣ ನೀಡಬೇಕು ಎಂದರು. 14 ಮತ್ತು 15 ನೇ ಹಣ ಕಾಸು ಯೋಜನೆಡಿಯಲ್ಲಿ ಬಂದಿರುವ 1.20 ಕೋಟಿ ರೂ ಅನುದಾನದಲ್ಲಿ 10 ಲಕ್ಷ ರೂಪಾಯಿ ಶೌಚಗೃಹಕ್ಕೆ ಹಾಗೂ 15 ಲಕ್ಷ ರೂಪಾಯಿಯನ್ನು ಹಸಿ- ಒಣ ಕಸ ಬುಟ್ಟಿಗಳ ಖರೀದಿಗೆ ಮೀಸಲಿಡಲಾಗುವುದೆಂದು ಅಧ್ಯಕ್ಷ ಎಸ್.ಕೆ.ನಾಗೇಂದ್ರ ತಿಳಿಸಿದರು.
ರಾಜೀನಾಮೆ ಇಂಗಿತ ವ್ಯಕ್ತಪಡಿಸಿದ ಅಧ್ಯಕ್ಷ: ಈ ಹಿಂದೆ ಪುರಸಭಾ ಅಧ್ಯಕ್ಷರ ಚುನಾವಣೆ ವೇಳೆ ಒಂದೇ ಪಕ್ಷದ ಸದಸ್ಯರಾದ ರಂಗಸ್ವಾಮಿ ಹಾಗೂ ಎಸ್.ಕೆ.ನಾಗೇಂದ್ರ ಮಧ್ಯೆ ತೀವ್ರ ಪೈಪೋಟಿ ನಡೆದಿತ್ತು, ಸಂಸದ ಡಿ.ಕೆ.ಸುರೇಶ್, ಶಾಸಕ ಡಾ.ಎಚ್.ಡಿ.ರಂಗನಾಥ್ ಮಧ್ಯ ಪ್ರವೇಶಿಸಿ ಅಧ್ಯಕ್ಷರ ಅಧಿಕಾರ ಹಂಚಿಕೆ ಮಾಡಿ ಮೊದಲು ಎಸ್.ಕೆ.ನಾಗೇಂದ್ರ ನಂತರ ರಂಗಸ್ವಾಮಿ ಅಧ್ಯಕ್ಷರಾಗುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ನಾಗೇಂದ್ರ ಕಳೆದ ವರ್ಷ ನ.10 ರಂದು ಅಧ್ಯಕ್ಷರಾಗಿ ಆಯ್ಕೆಗೊಂಡರು. ಅವಧಿ ಮುಗಿದ ಕಾರಣ ಅಧ್ಯಕ್ಷ ಸ್ಥಾನಕ್ಕೆ ನ.3ರಂದು ರಾಜೀನಾಮೆ ನೀಡಲು ತೀರ್ಮಾನ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದ್ದು, ಸಾಮಾನ್ಯ ಸಭೆಯಲ್ಲಿ ಇದು ನನ್ನ ಕೊನೆಯ ಸಭೆ ಎಂದು ನಾಗೇಂದ್ರ ಹೇಳಿದ್ದು ಪುಷ್ಟಿ ನೀಡಿದೆ.
ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷ ಸೆಮಿಉಲ್ಲಾ, ಮುಖ್ಯಾಧಿಕಾರಿ ಕೆ.ಪಿ.ರವಿಕುಮಾರ್, ಪರಿಸರ ಇಂಜಿನಿಯರ್ ಚಂದ್ರಶೇಖರ್, ಸದಸ್ಯರಾದ ಬಿ.ಎನ್.ಅರುಣ್‌ಕುಮಾರ್, ಕೆ.ಆರ್.ಜಯಲಕ್ಷ್ಮೀ, ರೂಪಿಣಿ, ಗೋಪಿ ಅರಸ್, ಶಿವಕುಮಾರ್ ಇದ್ದರು.