ಶಿರಸಿ: ವರ್ತಮಾನ ಕಾಲಘಟ್ಟದಲ್ಲಿ ತಂತ್ರಜ್ಞಾನದ ಸಹಾಯದಿಂದ ನಾಗರಿಕ ಪತ್ರಿಕೋದ್ಯಮ ಕೂಡ ಸಮಾಜದ ಅಂಕುಡೊಂಕು ತಿದ್ದುವ ಕಾರ್ಯ ಮಾಡುತ್ತಿದೆ ಎಂದು ವಿಜ್ಞಾನ ಬರಹಗಾರ ನಾಗೇಶ ಹೆಗಡೆ ಬಕ್ಕೆಮನೆ ಹೇಳಿದರು.
ಇಲ್ಲಿನ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಪತ್ರಿಕೋದ್ಯಮ ವಿಭಾಗ, ಬೆಂಗಳೂರಿನ ಅಭಿನವ ಪ್ರಕಾಶನ, ಪಾವನಾ ಪರಿಸರ ಟ್ರಸ್ಟ್ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ‘ಸೂರ್ಯನ ನೆರಳು’ ಸೃಜನಶೀಲ ಪ್ರತಿಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದ ಎಲ್ಲ ಭಾಗಗಳಲ್ಲಿ ನಡೆಯುವ ವಿದ್ಯಮಾನಗಳನ್ನು ಎತ್ತಿತೋರಿಸುವ ಅವಕಾಶ ಇಂದಿನ ದಿನಗಳಲ್ಲಿ ಇದೆ. ಜಗತ್ತಿನ ಯಾವುದೋ ಮೂಲೆಯಲ್ಲಿ ನಡೆಯುವ ಚಿಕ್ಕ ಸಂಗತಿ ಕೂಡ ಇಡೀ ಜಗತ್ತಿಗೆ ತಿಳಿಯುವ ಯುಗದಲ್ಲಿ ನಾವಿದ್ದೇವೆ. ಇದು ಪತ್ರಿಕೋದ್ಯಮದ ಸುವರ್ಣ ಯುಗವಾಗಿದೆ. ತಂತ್ರಜ್ಞಾನದಿಂದ ಪ್ರತಿಯೊಬ್ಬರೂ ಉತ್ತಮ ಪತ್ರಕರ್ತನಾಗುತ್ತ, ನಾಗರಿಕ ಪತ್ರಿಕೋದ್ಯಮ ಸಮಾಜದ ಅಂಕು ಡೊಂಕು ತಿದ್ದುವ ಕೆಲಸ ಮಾಡುತ್ತಿದೆ. ಆ ಮೂಲಕ ಜನಸಾಮಾನ್ಯರಲ್ಲಿ ಇನ್ನೂ ಹೆಚ್ಚಿನ ಸೂಕ್ಷ್ಮ ಜ್ಞಾನ ಮೂಡುತ್ತದೆ ಎಂದರು.
ಅನುವಾದಕಿ ಸಹನಾ ಹೆಗಡೆ ಮಾತನಾಡಿ, ಜ್ಞಾನದ ವಿಷಯದಲ್ಲಿ ಅತೃಪ್ತಿ ಇದ್ದಷ್ಟು ಒಳ್ಳೆಯದು. ಅನುವಾದದಲ್ಲಿ ಹಲವಾರು ಸಂಕಷ್ಟಗಳು ಎದುರಾಗುತ್ತವೆ. ಅವೆಲ್ಲವನ್ನು ಸಮರ್ಥವಾಗಿ ನಿಭಾಯಿಸಿದರೆ ಮಾತ್ರ ಉತ್ತಮ ಅನುವಾದ ಸಾಧ್ಯ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಕಾರ್ಯದರ್ಶಿ ನರಸಿಂಹ ಅಡಿ, ಉಪಸಮಿತಿ ಅಧ್ಯಕ್ಷ ಎಂ.ಎಂ ಹೆಗಡೆ ಬಕ್ಕಳ ಮಾತನಾಡಿದರು. ಕೃತಿಯ ಕಥನ ಮಾದರಿಗಳು, ಭಾಷೆ ಮತ್ತು ಶೈಲಿಯ ವಿಭಿನ್ನ ಆಯಾಮಗಳು, ಸಮಕಾಲೀನ ತವಕ ತಲ್ಲಣಗಳು ಮತ್ತು ಕೃತಿಯ ಆಶಯ ಆಕೃತಿ, ನಾಳಿನ ಸಮಾಜ ಮತ್ತು ಪತ್ರಿಕೋದ್ಯಮದ ಸವಾಲುಗಳಿಗೆ ಕಾಲಾಭಿವ್ಯಕ್ತಿ ಮತ್ತು ಕೃತಿಯ ಅಂತರ್ ಶಿಸ್ತಿನ ನೆಲೆಗಳು ವಿಷಯಗಳ ಕುರಿತಾಗಿ ಐದು ತಂಡಗಳಿಂದ ಸೃಜನಶೀಲ ಸ್ಪಂದನೆ ವ್ಯಕ್ತವಾಯಿತು. ಪ್ರಾಚಾರ್ಯ ಎ.ಕೆ.ಕಿಣಿ ಸ್ವಾಗತಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಘವೇಂದ್ರ ಜಾಜಿಗುಡ್ಡೆ ಪ್ರಾಸ್ತಾವಿಕ ಮಾತನಾಡಿದರು. ಶೈಲಜಾ ಗೋರ್ನಮನೆ ನಿರೂಪಿಸಿದರು.