ಜಿಲ್ಲೆ

ಅಂಕ, ಪದವಿ ಪಡೆಯಲು ಶಿಕ್ಷಣ ಕ್ಷೇತ್ರ ಸೀಮಿತ

ಮೈಸೂರು: ಶಿಕ್ಷಣ ಕ್ಷೇತ್ರವು ಅಂಕಗಳಿಗೆ ಮತ್ತು ಪದವಿ ಪಡೆಯುವುದಕ್ಕೆ ಮಾತ್ರ ಸೀಮಿತವಾಗಿದೆ ಎಂದು ಕೆ.ಆರ್.ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಎ.ಸುಮಾ ಕಳವಳ ವ್ಯಕ್ತಪಡಿಸಿದರು.

ರಾಜ್ಯಶಾಸ್ತ್ರ ಪ್ರಾಂಶುಪಾಲರ ಮತ್ತು ಉಪನ್ಯಾಸಕರ ವೇದಿಕೆ ವತಿಯಿಂದ ಮಹಾರಾಜ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕೈಪಿಡಿ ಬಿಡುಗಡೆ, ವಿಶೇಷ ಕಾರ್ಯಾಗಾರದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಫಲಿತಾಂಶದ ಜತೆಗೆ ನೈತಿಕತೆಯ ಮೌಲ್ಯ, ಪ್ರಜಾಪ್ರಭುತ್ವದ ಮಾದರಿ, ಜೀವನ ನಿರ್ವಹಿಸುವ ಕ್ರಮ ತಿಳಿಸಬೇಕು. ಆಗಲೇ ಒತ್ತಡದ ಬದುಕಿನಿಂದ ಹೊರಬರಲು ಸಾಧ್ಯ ಎಂದರು.

ರಾಜ್ಯಶಾಸ್ತ್ರ ವಿಷಯ ಓದುವುದರಿಂದ ವಿದ್ಯಾರ್ಥಿಗಳಲ್ಲಿ ವಿಶೇಷವಾಗಿ ಆಡಳಿತ ಕ್ರಮ, ಪ್ರಜಾಪ್ರಭುತ್ವ, ರಾಜಕೀಯ ವ್ಯವಸ್ಥೆ ತಿಳಿದುಕೊಳ್ಳಲು ಮತ್ತು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಅರಿಯಲು ಮಾರ್ಗದರ್ಶನವಾಗುತ್ತದೆ. ಪ್ರಸ್ತುತ ದಿನಗಳಲ್ಲಿ ಸಮಯದ ಅಭಾವದಿಂದ ಕಲಿಕಾ ಕೇಂದ್ರಿತ ಶಿಕ್ಷಣದ ಜತೆಗೆ ವಿದ್ಯಾರ್ಥಿಗಳಲ್ಲಿ ಚಟುವಟಿಕೆ ಹಮ್ಮಿಕೊಂಡು ಪ್ರಾಯೋಗಿಕವಾಗಿ ಅವರನ್ನು ಕೂಡ ರಸಪ್ರಶ್ನೆ, ನಾಯಕತ್ವದ ಬಗ್ಗೆ ಮಾದರಿ ಚಟುವಟಿಕೆ ನಡೆಸುವುದು ಉತ್ತಮ ಎಂದು ಅಭಿಪ್ರಾಯಪಟ್ಟರು.

ರಾಜ್ಯಶಾಸ್ತ್ರ ಪ್ರಾಂಶುಪಾಲರ ಮತ್ತು ಉಪನ್ಯಾಸಕರ ವೇದಿಕೆ ಅಧ್ಯಕ್ಷ ಎನ್.ಎಸ್.ಪಶುಪತಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ರಾಜ್ಯಶಾಸ್ತ್ರ ವಿಷಯ ತನ್ನ ಮಹತ್ವ ಕಳೆದುಕೊಳ್ಳುತ್ತಿದೆ. ಹಿಂದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರ ವಿಷಯವೇ ಜೀವನಾಡಿಯಾಗಿತ್ತು.

ಇತ್ತೀಚೆಗೆ ಮಾನವಿಕ ವಿಷಯಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿರುವುದು ವಿಷಾದದ ಸಂಗತಿಯಾಗಿದೆ. ಇದನ್ನು ರಕ್ಷಿಸುವ ನಿಟ್ಟಿನಲ್ಲಿ ಎಲ್ಲ ಉಪನ್ಯಾಸಕ ವೃಂದ ಹಾಗೂ ಸರ್ಕಾರ, ಸಮಾಜ ಮತ್ತು ಬುದ್ಧಿಜೀವಿಗಳು ಸಹಕಾರ ನೀಡಬೇಕೆಂದು ತಿಳಿಸಿದರು.

ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಪಿ.ನಾಗಮ್ಮ ಮಾತನಾಡಿ, ಪದವಿ ಪೂರ್ವ ಹಂತದಲ್ಲಿ ಉಪನ್ಯಾಸಕರಿಗೆ ಮೌಲ್ಯಮಾಪನ ಮತ್ತು ವಿಶೇಷ ಕಾರ್ಯಾಗಾರ ಪರಸ್ಪರ ವಿಚಾರ ಮಂಥನ ಹಾಗೂ ಚರ್ಚೆಗೆ ಅವಕಾಶ ಕಲ್ಪಿಸುತ್ತವೆ. ಜತೆಗೆ ಬೋಧನಾ ಕೌಶಲಗಳಿಗೆ ಅನೇಕ ವಿಚಾರ ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ಮಹಾರಾಜ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಉದಯ್‌ಕುಮಾರ್, ತಲಕಾಡು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಬಿ.ನಾಗರತ್ನಾ, ಸಂಘದ ಕಾರ್ಯದರ್ಶಿ ಶಿವರಾಜ್, ಖಜಾಂಚಿ ಎ.ಸಿ.ತರಣಿಕುಮಾರ್, ಡಾ.ಶಶಿಕಲಾ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಕಾಳಿಪ್ರಸಾದ್, ಪ್ರೇಮ್ ಕುಮಾರ್, ಮಹೇಶ್ ಹಾಗೂ 90 ರಾಜ್ಯಶಾಸ್ತ್ರ ಉಪನ್ಯಾಸಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.