ಜಿಲ್ಲೆ

ಅಂಕ ಗಳಿಸುವುದಷ್ಟೇ ಶಿಕ್ಷಣವಲ್ಲ, ಮಾನವೀಯತೆ ಮುಖ್ಯ: ಎಂ.ಕೆ.ಸವಿತಾ ಅಭಿಮತ

ಆರ್.ಕೃಷ್ಣ

ಮೈಸೂರು: ಶಿಕ್ಷಣ ಎಂದರೆ ಮಕ್ಕಳು ಹೆಚ್ಚು ಅಂಕ ಪಡೆಯುವುದಾಗಲಿ, ಇಂಗ್ಲಿಷ್ ಮಾತನಾಡುವುದಾಗಲಿ ಅಲ್ಲ, ಶಿಕ್ಷಣ ಎಂದರೆ ಮಾನವೀಯತೆ, ಸಹಾಯಗುಣ ಬೆಳೆಸಿಕೊಳ್ಳುವುದು ಎಂದು ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಎಂ.ಕೆ.ಸವಿತಾ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ರಾಮಕೃಷ್ಣನಗರದ ವಿಶ್ವಮಾನವ ವಿದ್ಯಾನಿಕೇತನ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಶಾಲಾ ಪದವಿ ಪ್ರದಾನ ಸಮಾರಂಭದಲ್ಲಿ ಶಾಲಾ ಕೈಪಿಡಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ತಮ್ಮ ಮಕ್ಕಳು ಅಧಿಕಾರಿಗಳಾಗಬೇಕು, ವೈದ್ಯ, ಇಂಜಿನಿಯರ್ ಅಗಬೇಕು ಎಂದು ಬಯಸುತ್ತಾರೆ. ಆದರೆ ಅದೆಲ್ಲಕ್ಕಿಂತ ಮಿಗಿಲಾಗಿ ಮಾನವೀಯ ಗುಣ ಬೆಳೆಸಿಕೊಳ್ಳಬೇಕು. ತಮ್ಮ ಕೈಯಲ್ಲಿ ಅಗುವ ಸಹಾಯ ಮಾಡುವ ಮೂಲಕ ಸಮಾಜದ ಋಣ ತೀರಿಸಬೇಕು ಎಂದು ಅಭಿಪ್ರಾಯಪಟ್ಟರು.
ಹಿಂದೆ ಸರ್ಕಾರಿ ಶಾಲೆಯಲ್ಲಿ ಓದುವಾಗ ಈಗಿರುವ ಯಾವುದೇ ಸೌಲಭ್ಯವಿರಲಿಲ್ಲ. ಆದರೆ ನಮಗಿದ್ದ ಶಿಕ್ಷಕರು ನಮ್ಮ ಭವಿಷ್ಯದ ಬಗ್ಗೆ ತುಂಬಾ ಕಾಳಜಿ ವಹಿಸಿದ್ದರು. ಶ್ರಮ ಜೀವನದ ಮೌಲ್ಯಗಳ ಜತೆಗೆ ಪಾಠ ಕಲಿಯುವವರು ಮೇಲೆ ಬರುತ್ತಾರೆ. ಕೆಲಸ ಸಿಗದಿದ್ದರೂ ಪರವಾಗಿಲ್ಲ ಆತ್ಮವಿಶ್ವಾಸ ಬೆಳೆಸಿಕೊಂಡರೆ, ನಿಮ್ಮ ಬದುಕನ್ನು ಕಟ್ಟಿಕೊಳ್ಳುವ ಶಕ್ತಿ ನಿಮಗೆ ಬರುತ್ತದೆ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಪ್ರೊ. ಚಂದ್ರಶೇಖರೇಗೌಡ, ಕಾರ್ಯದರ್ಶಿ ಪ್ರಭಾಮಣಿ, ಸಂಸ್ಕೃತ ವಿದ್ವಾನ್ ಶ್ರೀನಿವಾಸಮೂರ್ತಿ, ಪ್ರೊ ಕೆ.ಎ.ದಿವಾಕರ್, ಮುಖ್ಯಶಿಕ್ಷಕಿ ವಿಜಯಲಕ್ಷ್ಮೀ, ಆಡಳಿತಾಧಿಕಾರಿ ನಮ್ರತಾ, ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ್ ಇತರರು ಇದ್ದರು.