ಬಾಗಲಕೋಟೆ: ಬಾಗಲಕೋಟೆ ಜಿಲ್ಲಾ ವಚನ ಸಾಹಿತ್ಯ ದ್ವಿತೀಯ ಸಮ್ಮೇಳನ ಅ.೨೮ ರಂದು ರಂದು ಹಮ್ಮಿಕೊಳ್ಳಲಾಗಿದ್ದು, ಗಡಿನಾಡಿನಲ್ಲಿ ಕನ್ನಡದ ಕಂಪು ಬೆಳಗಿಸಿದ ಹಿರಿಯ ಸಾಹಿತಿ ತುಂಗಳದ ಮಲ್ಲಪ್ಪ ಶಿವಪ್ಪ ಸಿಂಧೂರ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಬಾಗಲಕೋಟೆ ಜಿಲ್ಲಾ ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀಶೈಲ ಕರಿಶಂಕರಿ ಹೇಳಿದರು.
ನಗರದ ಸಾಯಿ ಮಂದಿರ ಆವರಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಜಿಲ್ಲಾ ಹಾಗೂ ರಾಜ್ಯ ಘಟಕದ ಆಶ್ರಯದಲ್ಲಿ ಸಾಯಿ ಮಂದಿರ ಆವರಣದಲ್ಲಿ ಸಮ್ಮೇಳನ ನಡೆಯಲಿದ್ದು, ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ವೇದಿಕೆಗೆ ವಚನ ಪಿತಾಮಹ ಫ.ಗು. ಹಳಕಟ್ಟಿ ಅವರ ಹೆಸರು ನಾಮಕರಣ ಮಾಡಲಾಗಿದೆ ಎಂದರು.
ಅಂದು ಬೆಳಗ್ಗೆ ೮ ಗಂಟೆಗೆ ಸಾಯಿ ಮಂದಿರದಲ್ಲಿ ಷಟಸ್ಥಲ ಧ್ವಜಾರೋಹಣ ಶಿರೂರದ ಮಹಾಂತ ತೀರ್ಥದ ಡಾ.ಬಸವಲಿಂಗ ಸ್ವಾಮೀಜಿ ನೆರವೇರಸಲಿದ್ದಾರೆ. ನಂತರ ೯ ಗಂಟೆಗೆ ವಿದ್ಯಾಗಿರಿ ಬಸವೇಶ್ವರ ಇಂಜನಿಯರಿಂಗ್ ಕಾಲೇಜï ವೃತ್ತದಿಂದ ಆರಂಭವಾಗುವ ವಚನ ಕಟ್ಟುಗಳ ಭವ್ಯ ಮೆರವಣಿಗೆಗೆ ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ ಚಾಲನೆ ನಿಡಲಿದ್ದಾರೆ. ನಗರಸಭೆ ಸದಸ್ಯರಾದ ವಿ.ವಿ.ಶಿರಗಣ್ಣವರ, ಶೋಭಾ ರಾವ್, ಪ್ರಕಾಶ ಹಂಡಿ ಉಪಸ್ಥಿತರಿರಲಿದ್ದು, ಕಲಾ ತಂಡಗಳು ಭಾಗವಹಿಸಲಿವೆ ಎಂದು ಹೇಳಿದರು.
ಮಲ್ಲಪ್ಪ ಶಿವಪ್ಪ ಸಿಂಧೂರ ಸರ್ವಾಧ್ಯಕ್ಷತೆಯಲ್ಲಿ ಬೆಳಗ್ಗೆ ೧೦ ಗಂಟೆಗೆ ನಡೆಯುವ ಸಮ್ಮೇಳನವನ್ನು ಖ್ಯಾತ ಸಾಹಿತಿ ಡಾ.ರಾಜಶೇಖರ ಮಠಪತಿ ಉದ್ಘಾಟಿಸಲಿದ್ದಾರೆ. ಚರಂತಿಮಠದ ಪ್ರಭು ಸ್ವಾಮೀಜಿ, ಗುರುಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ವಚನ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಎಂ.ವಿ.ತ್ಯಾಗರಾಜ ಬಸವ ಭಾವಪೂಜೆ, ಸಂಗಣ್ಣ ಗದ್ದಿ ಆಶಯ ನುಡಿಗಳನ್ನು ಹೇಳಲಿದ್ದಾರೆ. ಡಾ. ಸಿದ್ದಣ್ಣ ಬಾಡಗಿ ಅವರ ಕಾಯಕದಿಂದ ವಿಕಾಸದೆಡೆ ಗ್ರಂಥವನ್ನು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಜಿ.ಎನ್.ಪಾಟೀಲ ಬಿಡುಗಡೆ ಮಾಡಲಿದ್ದಾರೆ. ವಚನ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಶ್ರೀಶೈಲ ಕರಿಶಂಕರಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಚನ ಸಾಹಿತ್ಯ ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎ. ರಮೇಶಕುಮಾರ, ಚಿತ್ರದುರ್ಗದ ಸರ್ವಮಂಗಳಾ ಭಾರತಿ, ಹಿರಿಯ ಸಾಹಿತಿ ಸಿದ್ದು ದಿವಾನ, ವಿಭಾಗೀಯ ಸಂಚಾಲಕ ಮಹಾಂತೇಶ ಗಜೇಂದ್ರಗಡ ಆಗಮಿಸಲಿದ್ದಾರೆ ಎಂದರು.
ಸಮ್ಮೇಳನದಲ್ಲಿ ನಾಲ್ಕು ಗೋಷ್ಠಿಗಳು ನಡೆಯಲಿವೆ. ಸಂಜೆ ಬಹಿರಂಗ ಸಭೆ ಹಾಗೂ ಸಮಾರೋಪದಲ್ಲಿ ಶಿರೂರದ ಶ್ರೀ ಮಹಾಂತತೀರ್ಥದ ಡಾ. ಬಸವಲಿಂಗ ಸ್ವಾನ್ನಿಧ್ಯ ವಹಿಸಲಿದ್ದಾರೆ. ಹುನಗುಂದದ ವಿ.ಮ. ಕಾಲೇಜಿನ ಪ್ರಾಧ್ಯಾಪಕ ಡಾ.ಮುರ್ತುಜಾ ಒಂಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಜಿ.ಎನ್. ಪಾಟೀಲ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎ.ಎಸ್. ಪಾವಟೆ, ವಚನ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಮಹಾಬಳೇಶ್ವರ ಗುಡಗುಂಟಿ, ಗೌರವ ಕಾರ್ಯದರ್ಶಿ ರವಿ ಕಂಗಳ, ಬಾಗಲಕೋಟೆ ತಾಲೂಕು ಅಧ್ಯಕ್ಷ ಬಸವರಾಜ ತಿಪ್ಪಶೆಟ್ಟಿ ಉಪಸ್ಥಿತರಿದ್ದರು.