ಬಾಗಲಕೋಟೆ: ಅಂಗವಿಕಲ ಮಕ್ಕಳ ಹಾಗೂ ಹಿರಿಯ ನಾಗರಿಕರ, ಆರೈಕೆ ಮಾಡುವ ಆರೈಕೆದಾರರ ದಿನಾಚರಣೆಯನ್ನು ಅ.೧೯ ರಂದು ಆಚರಿಸಲಾಗುವುದು ಎಂದು ಬರ್ಡ್ಸ ಸೇವಾ ಸಂಸ್ಥೆಯ ಸಂಚಾಲಕ ಎಂ.ಎ. ಅಗಸಿಮುಂದಿನ ಹೇಳಿದರು.
ಅಂದು ಬೆಳಗ್ಗೆ ೧೦ ಗಂಟೆಗೆ ೧೦ ಗಂಟೆಗೆ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಜಿಲ್ಲಾ ಆರೈಕೆದಾರರ ಜಾಥಾ ಆರಂಭವಾಗಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಿವಿವಿ ಸಂಘದ ನೂತನ ಸಭಾಭವನ ತಲುಪಿ ಸಮಾವೇಶಗೊಳ್ಳಲಿದೆ. ೧೧ ಗಂಟೆ ವೇದಿಕೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್. ಪೂಜಾರ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ, ಸಿಇಒ ಟಿ.ಭೂಬಾಲನ್, ಎಸ್‌ಪಿ ಜಯಪ್ರಕಾಶ ಹಕ್ಕರಕಿ ಭಾಗವಹಿಸಲಿದ್ದಾರೆ ಎಂದರು.
ಆರೈಕೆದಾರರ ಶ್ರಮ, ಸೇವೆ, ಬದುಕು ಹಾಗೂ ಹಕ್ಕುಗಳನ್ನು ಗುರುತಿಸಿ ಅವರು ಘನತೆ ಮತ್ತು ಗೌರವದಿಂದ ಬದುಕಲು ಗುರುತಿನ ಚೀಟಿ, ಉಚಿತ ಚಿಕಿತ್ಸೆ, ಆಪ್ತ ಸಮಾಲೋಚನೆ, ಸಾರಿಗೆ ವ್ಯವಸ್ಥೆ ಮತ್ತು ಪೋಷಣಾ ಭತ್ಯೆಯನ್ನು ನೀಡುವಂತೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
ಆರೈಕೆದಾರರಾದ ಲಕ್ಷ್ಮಣ ಗೌಡರ, ಕಾವ್ಯಾ ಬಳಿಗಾರ, ವೇದಾವತಿ ಹವೇಲಿ, ಶಾಂತಾ ಗೌಡರ, ಆಶಾ ಶಿಂಧೆ ಉಪಸ್ಥಿತರಿದ್ದರು.