ಜಿಲ್ಲೆ

ಅ.7ಕ್ಕೆ ನೂತನ ಭವನದಲ್ಲಿ ವಾಲ್ಮೀಕಿ ಜಯಂತಿ

ಚಿತ್ರದುರ್ಗ

ನಗರದ ನೂತನ ವಾಲ್ಮೀಕಿ ಭವನದಲ್ಲಿ ಅ.7ರಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಎಡಿಸಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.

ಡಿಸಿ ಕಚೇರಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 10ಕ್ಕೆ ಕೋಟೆ ಸಮೀಪ ಆರಂಭವಾಗಲಿರುವ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ,ಉಚ್ಚಂಗಿ ಯಲ್ಲಮ್ಮ ದೇವಸ್ಥಾನ, ಆನೆಬಾಗಿಲು, ಗಾಂಧಿವೃತ್ತ, ಎಸ್‌ಬಿಐ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಮದಕರಿ ನಾಯಕ ವೃತ್ತದಲ್ಲಿರುವ ವಾಲ್ಮೀಕಿ ಭವನ ತಲುಪಲಿದೆ. ಮಧ್ಯಾಹ್ನ 12ಕ್ಕೆ ವೇದಿಕೆ ಕಾರ್ಯಕ್ರಮ ಆರಂಭವಾಗಲಿದೆ ಎಂದು ತಿಳಿಸಿದರು.

ಅಂದಾಜು 10 ಕೋಟಿ ರೂ. ವ್ಯಯಿಸಿ ಮದಕರಿ ನಾಯಕ ವೃತ್ತದಲ್ಲಿ ವಾಲ್ಮೀಕಿ ಭವನ ನಿರ್ಮಿಸಿ ಉದ್ಘಾಟಿಸಲಾಗಿದೆ. ಆದರೆ, ಸಾರ್ವಜನಿಕರ ಬಳಕೆಗೆ ಲಭ್ಯವಾಗಿಲ್ಲ. ಕಳೆದ 3 ವರ್ಷಗಳಿಂದಲೂ ಅಧಿಕಾರಿಗಳ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಲಿಂಗವ್ವನಾಗ್ತಿಹಳ್ಳಿ ತಿಪ್ಪೇಸ್ವಾಮಿ ಹೇಳಿದರು.

ಅಧಿಕಾರಿಗಳು ಸಬೂಬು ಹೇಳದೇ ಈ ಬಾರಿ ವಾಲ್ಮೀಕಿ ಭವನದಲ್ಲಿಯೇ ಕಾರ್ಯಕ್ರಮ ನಡೆಸಬೇಕು. ಇದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಬಿ. ಗೌಡಗೆರೆ ಹೇಳಿದರು.

ನೂತನ ವಾಲ್ಮೀಕಿ ಭವನದಲ್ಲಿ ಸಣ್ಣ, ಪುಟ್ಟ ದುರಸ್ತಿ ಕೆಲಸವಿದೆ. ಇದಕ್ಕೆ ಜಿಲ್ಲಾ ಖನಿಜ ಪ್ರತಿಷ್ಠಾನದಡಿ ಅನುದಾನ ನೀಡುವಂತೆ ಪತ್ರಕರ್ತ ಎಂ.ಎನ್. ಅಹೋಬಲಪತಿ ಎಡಿಸಿಯನ್ನು ಕೋರಿದರು.

ಭವನವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರೆ ಸಾರ್ವಜನಿಕರಿಗೆ ಸದ್ಭಳಕೆಯಾಗಲಿದೆ. ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿ ಕ್ರಮ ಕೈಗೊಳ್ಳಬೇಕು. ಭವನದ ಬಳಿ ಖಾಸಗಿ ವ್ಯಕ್ತಿಗಳು ಬಂಟಿಂಗ್, ಬ್ಯಾನರ್‌ಗಳನ್ನು ಕಟ್ಟದಂತೆ ನಿರ್ಬಂಧಿಸುವಂತೆ ಕುಮಾರಸ್ವಾಮಿ ನಗರಸಭೆ ಅಧಿ ಕಾರಿಗಳಿಗೆ ಸೂಚಿಸಿದರು.

ಜಯಂತಿಗೂ ಮುನ್ನ ವಾಲ್ಮೀಕಿ ಕುರಿತು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಆಯೋಜಿಸಬೇಕು. ಜಿಲ್ಲಾ ನಾಯಕ ಸಮಾಜದ ಮುಖಂಡರೊಂದಿಗೆ ಚರ್ಚಿಸಿ ಉಪನ್ಯಾಸಕರನ್ನು ಅಂತಿಮಗೊಳಿಸಬೇಕು. ಉತ್ತಮ ಕಲಾ ತಂಡದಿಂದ ಗೀತಗಾಯನ ಆಯೋಜಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಜಿಲ್ಲಾ ನಾಯಕ ಸಮಾಜದಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಹಾಗೂ ಸೇವೆ ಮಾಡಿದ ಮಹನೀಯರನ್ನು ಗುರುತಿಸಿ ಸಮಾರಂಭದಲ್ಲಿ ಸನ್ಮಾನಿಸಲಾಗುವುದು. ಇದಕ್ಕೆ ಅನುಮತಿ ಕೊಡಬೇಕೆಂದು ನಾಯಕ ಸಮಾಜದ ಜಿಲ್ಲಾಧ್ಯಕ್ಷ ಎಚ್.ಜೆ. ಕೃಷ್ಣಮೂರ್ತಿ ಹೇಳಿದರು.

ನಗರಸಭೆ ಅಧ್ಯಕ್ಷೆ ಅನಿತಾ ರಮೇಶ್, ಜಿಪಂ ಉಪ ಕಾರ್ಯದರ್ಶಿ ಡಾ. ರಂಗಸ್ವಾಮಿ, ಎಎಸ್‌ಪಿ ಡಾ. ಶಿವಕುಮಾರ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್.ದಿವಾಕರ್, ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಬಿ. ಆನಂದ್, ಜಿಲ್ಲಾ ಮದಕರಿ ನಾಯಕ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್. ಸಂದೀಪ್, ಸಮುದಾಯದ ಮುಖಂಡರಾದ ಎಚ್‌ಎಂಎಸ್ ನಾಯಕ, ಡಾ.ಎಚ್. ಗುಡ್ಡದೇಶ್ವರಪ್ಪ, ಸಿ.ಜಿ. ಶ್ರೀನಿವಾಸ, ಬಾಲೇನಹಳ್ಳಿ ತಿಪ್ಪೇಸ್ವಾಮಿ, ಎಚ್. ತಿಪ್ಪಯ್ಯ, ಮಂಜುನಾಥ್, ಪ್ರಶಾಂತ್, ಅಶೋಕ ಬೆಳಗಟ್ಟ, ಶರಣಪ್ಪ, ರತ್ನಮ್ಮ, ಮದಕರಿ ನಾಯಕ, ಅರುಣ್, ಇಂಗಳದಾಳ್ ದರ್ಶನ್ ಇತರರು ಇದ್ದರು.