filter: 101; fileterIntensity: 0.8; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.36095223, 0.40167865);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 45; 
ಜಿಲ್ಲೆ

ಅ.5 ರಿಂದ ಜಯದೇವ ಶ್ರೀ ಕ್ರೀಡಾಜಾತ್ರೆ

ಚಿತ್ರದುರ್ಗ: ಶರಣಸಂಸ್ಕೃತಿ ಉತ್ಸವ, ಶ್ರೀ ಜಯದೇವ ಶ್ರೀ 150ನೇ ಜಯಂತ್ಯುತ್ಸವದ ಅಂಗವಾಗಿ ಅ.5 ರಿಂದ 7ರ ವರೆಗೆ ನಗರದಲ್ಲಿ ಕ್ರೀಡಾಜಾತ್ರೆ ನಡೆಯಲಿದೆ ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು.
ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಜಯದೇವ ಕಪ್ ಜಿಲ್ಲಾಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಹೊನಲು ಬೆಳಕಿನ ಪಂದ್ಯಾವಳಿ ಏರ್ಪಡಿಸಲಾಗಿದೆ. ಜಿಲ್ಲೆಯ 1200 ಕ್ಕೂ ಹೆಚ್ಚು ಕ್ರೀಡಾಪಟುಗಳು ಕಬಡ್ಡಿ, ಖೋಖೋ, ವಾಲಿಬಾಲ್ ಮತ್ತು ಹ್ಯಾಂಡ್‌ಬಾಲ್ ಪಂದ್ಯಾವಳಿಗಳಲ್ಲಿ ಭಾಗವಹಿಸಲಿದ್ದಾರೆ ಎಂದರು.
ಅಂದು ಬೆಳಗ್ಗೆ 10 ಗಂಟೆಗೆ ನಗರದಲ್ಲಿ ಬೈಕ್‌ರ‌್ಯಾಲಿ ಆಯೋಜಿಸಲಾಗಿದೆ. ನಗರಸಭೆ ಅಧ್ಯಕ್ಷೆ ಸುಮಿತಾ ರಾಘವೇಂದ್ರ ರ‌್ಯಾಲಿ ಉದ್ಘಾಟಿಸಲಿದ್ದಾರೆ. ಶ್ರೀ ತಿಪ್ಪೇರುದ್ರಸ್ವಾಮಿ, ಶ್ರೀ ಬಸವಯೋಗ ಪ್ರಭು ಸ್ವಾಮಿ ಸಾನ್ನಿಧ್ಯ ವಹಿಸಲಿದ್ದಾರೆ. ಸಂಜೆ 4 ಗಂಟೆಗೆ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಆರಂಭವಾಗಲಿರುವ ಜಯದೇವ ಶ್ರೀಗಳ ಬೆಳ್ಳಿಮೂರ್ತಿ ಪಲ್ಲಕ್ಕಿ ಉತ್ಸವಕ್ಕೆ ಸಂಸದ ಗೋವಿಂದ ಎಂ. ಕಾರಜೋಳ ಚಾಲನೆ ನೀಡಲಿದ್ದಾರೆ. ಸಂಜೆ 6 ಕ್ಕೆ ಕ್ರೀಡಾಕೂಟವನ್ನು ಕಾರ್ಮಿಕ ಸಚಿವ ಸಂತೋಷ್‌ಲಾಡ್ ಉದ್ಘಾಟಿಸುವರು ಎಂದು ವಿವರಿಸಿದರು.
ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು, ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದು, ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ನಾನಾ ಗಣ್ಯರು ಆಗಮಿಸಲಿದ್ದಾರೆ. 6ರಂದು ಆಯೋಜಿಸಿರುವ ಮಹಿಳಾ ಕ್ರೀಡಾಕೂಟವನ್ನು ನಟಿ ಅಶ್ವಿ ನಿ ಗೌಡ ಉದ್ಘಾಟಿಸಲಿದ್ದು, ನಾನಾ ಗಣ್ಯರು ಉಪಸ್ಥಿತರಿರುವರು. 7 ರಂದು ಸಂಜೆ 6 ಕ್ಕೆ ಏರ್ಪಡಿಸಿರುವ ಕ್ರೀಡಾಕೂಟ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯವನ್ನು ಶಿವಬಸವ ಗುರು ಮುರುಘರಾಜೇಂದ್ರ ಶ್ರೀ ವಹಿಸಲಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಬಹುಮಾನ ವಿತರಿಸುವರು ಎಂದರು.
ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ವಸತಿ, ಊಟದ ವ್ಯವಸ್ಥೆ ಮಾಡಲಾಗಿದೆ. ಬೆಳ್ಳಿಮೂರ್ತಿ ಪಲ್ಲಕ್ಕಿ ಉತ್ಸವದಲ್ಲಿ ಕ್ರೀಡಾಪಟುಗಳು, ಅವರ ಪಾಲಕರು ಭಾಗವಹಿಸಲಿದ್ದಾರೆ. ನಾಗರಿಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಜಿಪಂ ಕೆಡಿಪಿ ಸದಸ್ಯ ಕೆ.ಸಿ. ನಾಗರಾಜ್ ಮಾತನಾಡಿ, ಕ್ರೀಡಾಕೂಟದಲ್ಲಿ ವಿವಿಧ ಕ್ರೀಡೆಗಳ ಸುಮಾರು 58 ತಂಡಗಳು ಭಾಗವಹಿಸಲಿವೆ. ಈಗಾಗಲೇ ಕ್ರಿಕೆಟ್ ಪಂದ್ಯಾವಳಿ ಮುಕ್ತಾಯಗೊಂಡಿದೆ. ಕ್ರೀಡಾಕೂಟದ ಪ್ರಾರಂಭ ಹಾಗೂ ಮುಕ್ತಾಯ ದಿನದಂದು ವರ್ಣರಂಜಿತ ಕಾರ‌್ಯಕ್ರಮಗಳು ನಡೆಯಲಿವೆ. ಜಯದೇವ ಶ್ರೀಗಳ ಜೀವನ ಚರಿತ್ರೆ ಲೇಸರ್ ಶೋ ಇರುತ್ತದೆ ಎಂದರು.
ಕ್ರೀಡಾಕೂಟ ಸಮಿತಿ ಅಧ್ಯಕ್ಷ ಶ್ರೀರಾಮ್, ಗೊಪ್ಪೆ ಮಂಜುನಾಥ್, ಎಚ್.ಎಂ. ಮಂಜುನಾಥ್, ಫಕೃದ್ದೀನ್, ಪ್ರಕಾಶ್‌ರಾಮ್‌ನಾಯ್ಕ, ಸೈಯದ್‌ಅನೀಸ್, ಸೈಯದ್ ಖುದ್ದೂಸ್, ವೀರೇಂದ್ರಕುಮಾರ್, ನಾಗರಾಜ್, ಓಬಳೇಶ್ ನಾಯಕ್, ವಿಜಯ್ ಮತ್ತಿತರರು ಇದ್ದರು.

8ರಂದು ಸಿಎಂ ಸಿದ್ದರಾಮಯ್ಯ ಭಾಗಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶರಣ ಸಂಸ್ಕೃತಿ ಉತ್ಸವ ಹಾಗೂ ಶ್ರೀ ಜಯದೇವ ಶ್ರೀಗಳ ಜಯಂತ್ಯುತ್ಸವ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ. ಅ.10ರ ಬದಲು ಅವರು ಅ.8ರಂದು ನಡೆಯುವ ಸಂಜೆ 6ಕ್ಕೆ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಯದೇವ ದಿಗ್ವಿಜಯ ಸಂಸ್ಮರಣ ಸಂಪುಟ ಬಿಡುಗಡೆ ಮಾಡಲಿದ್ದಾರೆ ಎಂದರು.