ಮೈಸೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕೈಗೊಂಡಿರುವ ಭಾರತ ಒಗ್ಗೂಡಿಸಿ ಯಾತ್ರೆ ಅಕ್ಟೋಬರ್ 2ರಂದು ಚಾಮುಂಡೇಶ್ವರಿ ಕ್ಷೇತ್ರದ ಕಡಕೊಳ ಗ್ರಾಮವನ್ನು ಪ್ರವೇಶಿಸಲಿದೆ ಎಂದು ಕಾಂಗ್ರೆಸ್ ಮುಖಂಡ ಅಧ್ಯಕ್ಷ ಕೆ.ಮರಿಗೌಡ ತಿಳಿಸಿದರು.
ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಗುರುವಾರ ಕರೆದಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಭೂತ್‌ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, 5 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಲಿದ್ದಾರೆ. ಈ ಐತಿಹಾಸಿಕ ಪಾದಯಾತ್ರೆಯನ್ನು ಯಶಸ್ವಿಗೊಳಿಸಿ ಕೇಂದ್ರ ಮತ್ತು ರಾಜ್ಯದ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕಾಗಿದೆ ಎಂದರು.
ಬಿಜೆಪಿ ಸರ್ಕಾರ ದೇಶದ ಸಂಪತ್ತನ್ನೆಲ್ಲ ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದಾರೆ. ದಿನಬಳಕೆ ವಸ್ತುಗಳ ಬೆಲೆಗಳು ಗಗನಮುಟ್ಟಿವೆ. ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಆದ್ದರಿಂದ ಬಿಜೆಪಿ ಸರ್ಕಾರದ ವಿರುದ್ಧ ಜನಜಾಗೃತಿ ಮೂಡಿಸಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದ್ದು, ಎಲ್ಲ ಜಾತಿ ಜನಾಂಗದವರು ಸಹ ಬೆಂಬಲ ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಯಾರಿಗಾದರೂ ಕೊಡಲಿ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ. ಈ ಚುನಾವಣೆಯಲ್ಲಿ ನಾವು ಗೆಲ್ಲದಿದ್ದರೆ ನಮಗೆ ಉಳಿಗಾಲವಿಲ್ಲ ಎಂದರು.
ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ದೊಡ್ಡನಾಯಕರು. ಅವರ ನೆರಳಿನಲ್ಲಿ ನಾವು ಪಕ್ಷ ಗೆಲ್ಲಿಸಬೇಕಾಗಿದೆ. ಈ ಕ್ಷೇತ್ರದ ಹಾಲಿ ಶಾಸಕರನ್ನು ಸೋಲಿಸುವ ಶಕ್ತಿ ಕಾಂಗ್ರೆಸ್ ಕಾರ್ಯಕರ್ತರಿಗಿದ್ದು, ಸಿದ್ದರಾಮಯ್ಯಗೆ ಗೌರವ ತರಬೇಕಾಗಿದೆ. ನಾವು ಚಾಮುಂಡೇಶ್ವರಿಯಲ್ಲಿ ಗೆಲ್ಲಲೇಬೇಕು. ನಾವು ಪ್ರತಿ ಗ್ರಾಮಕ್ಕೂ ಸಂಘಟನೆಗಾಗಿ ಬರುತ್ತಿದ್ದೇವೆ. ನಿಮ್ಮೆಲ್ಲರ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.
ಮಾಜಿ ಮೇಯರ್ ಟಿ.ಬಿ.ಚಿಕ್ಕಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ಸತೀಶ್‌ಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಹೊಸಹುಂಡಿ ರಘು, ಕೆಪಿಸಿಸಿ ಕಾರ್ಯದರ್ಶಿ ಗುರುಪಾದಸ್ವಾಮಿ, ಮುಖಂಡರಾದ ಕೃಷ್ಣಕುಮಾರ್ ಸಾಗರ್, ಹಿನಕಲ್ ಹೊನ್ನಪ್ಪ, ರಾಜಣ್ಣ, ಹರೀಶ್ ಮೊಗಣ್ಣ, ಉಮಾಶಂಕರ್, ಸಿದ್ದರಾಜು ಇನ್ನಿತರರು ಇದ್ದರು.