ಜಿಲ್ಲೆ

ಅ.24ರಿಂದ ನ.3ರವರೆಗೆ ಹಾಸನಾಂಬ ದೇವಿ ದರ್ಶನ

ಹಾಸನ: ಜಿಲ್ಲೆಯ ಅಧಿದೇವತೆ ಹಾಸನಂಬ ದೇವಿ ಜಾತ್ರಾ ಮಹೋತ್ಸವ ಅಕ್ಟೋಬರ್ 24 ರಿಂದ ನವೆಂಬರ್ 3ರವರೆಗೆ ನಡೆಯಲಿದ್ದು, ಈ ಅದ್ದೂರಿ ಮಹೋತ್ಸವದಲ್ಲಿ ಲೋಪವಾಗದಂತೆ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದು ಸಂಸದ ಶ್ರೇಯಸ್ ಪಟೇಲ್ ಮತ್ತು ಶಾಸಕ ಎಚ್.ಪಿ. ಸ್ವರೂಪ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಹಾಸನಾಂಬ ದೇವಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಂಸದರು, ಹಾಸನಾಂಬ ದೇವಿ ದರ್ಶನಕ್ಕೆ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಜನರು ಆಗಮಿಸುವ ನಿರೀಕ್ಷೆಯಿದೆ. ಉತ್ಸವದಲ್ಲಿ ಯಾವುದೇ ರೀತಿ ಸಣ್ಣ ಲೋಪವಾಗದಂತೆ ಅತ್ಯಂತ ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.
ಕಳೆದ ಬಾರಿ ಸಣ್ಣ ಪುಟ್ಟ ತಪ್ಪುಗಳು ಆಗಿದ್ದವು. ಈ ಬಾರಿ ಅವುಗಳನ್ನು ಸರಿಪಡಿಸಿ ಅದ್ದೂರಿ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಕೈಗೊಂಡು ಭಕ್ತಾದಿಗಳ ಅನುಕೂಲಕ್ಕೆ ಅವರ ಮೂಲಭೂತ ಸೌಕರ್ಯ ಮತ್ತು ರಾಜ್ಯದ ನಾನಾ ಭಾಗದಿಂದ ಗಣ್ಯರು ಆಗಮಿಸಲಿದ್ದು ಶಿಷ್ಟಾಚಾರ ಉಲ್ಲಂಘನೆಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಿ ಎಂದು ಹೇಳಿದರು.
ಶಾಸಕ ಎಚ್.ಪಿ. ಸ್ವರೂಪ್ ಮಾತನಾಡಿ, ಈ ಬಾರಿ ಹಾಸನಾಂಬ ಜಾತ್ರಾ ಮಹೋತ್ಸವ 11 ದಿನಗಳ ಕಾಲ ನಡೆಯಲಿದೆ. ಮೊದಲ ದಿನ ಮತ್ತು ಕೊನೆಯ ದಿನ ಸಾರ್ವಜನಿಕರಿಗೆ ಅವಕಾಶವಿರುವುದಿಲ್ಲ. ಕಳೆದ ಬಾರಿಯ ನ್ಯೂನತೆಗಳನ್ನು ಸರಿಪಡಿಸಿಕೊಂಡು ಈ ಬಾರಿ ಅದ್ದೂರಿ ಮಹೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಈಗಾಗಲೇ ಕೈಗೊಂಡಿದ್ದು ಎಲ್ಲ ಇಲಾಖೆಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ಹೇಳಿದರು.
ಈಗಿನಿಂದಲೇ ನಗರಸಭೆ ವತಿಯಿಂದ ಸ್ವಚ್ಛತೆ, ವಿದ್ಯುತ್ ಅಲಂಕಾರ ಮತ್ತು ವಿವಿಧ ಕಾರ್ಯಕ್ರಮಗಳ ರೂಪುರೇಷೆಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಬೇಕು. ಇದಲ್ಲದೆ ಈ ಬಾರಿ ವಿಶೇಷವಾಗಿ ಹಾಸನಾಂಬ ದೇವಾಲಯದ ಗರ್ಭಗುಡಿಯ ಬಾಗಿಲಿಗೆ ಬೆಳ್ಳಿಯನ್ನು ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ. ಇದಕ್ಕೆ ದಾನಿಗಳು ಕೂಡ ಇದ್ದಾರೆ. ಅವರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಿ ಎಂದರು.
ಜಿಲ್ಲಾಧಿಕಾರಿ ಸಿ. ಸತ್ಯಭಾಮ ಮಾತನಾಡಿ, ಕಳೆದ ಬಾರಿಗಿಂತ ಈ ಬಾರಿ ವಿಜೃಂಭಣೆಯಿಂದ ಹಾಸನಾಂಬ ದೇವಿ ಜಾತ್ರಾ ಮಹೋತ್ಸವ ಆಚರಿಸಲು ನಿರ್ಧರಿಸಲಾಗಿದ್ದು, ಉದ್ಘಾಟನೆಗೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಆಹ್ವಾನಿಸಲಾಗಿದೆ. ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಶಿಷ್ಟಾಚಾರದ ಪ್ರಕಾರ ಉದ್ಘಾಟನೆಗೊಳ್ಳಲಿದೆ. ಮೊದಲನೇ ದಿನ ಮತ್ತು ಕೊನೆಯ ದಿನ ಸಾರ್ವಜನಿಕರಿಗೆ ಅವಕಾಶವಿರುವುದಿಲ್ಲ. ಉಳಿದ ಒಂಬತ್ತು ದಿನಗಳು ದಿನದ 24 ಗಂಟೆಯೂ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.
ಇನ್ನುಳಿದಂತೆ ಹೂವಿನ ಅಲಂಕಾರ ದೀಪಾಲಂಕಾರ ದಸರಾ ಮಾದರಿಯಲ್ಲಿ ವಿದ್ಯುತ್ ಅಲಂಕಾರ ಹಾಗೂ ಇನ್ನಿತರೆ ವ್ಯವಸ್ಥೆಗಳನ್ನ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಲಾಗಿದೆ. ಅಲ್ಲದೆ ಟೆಂಡರ್ ಪ್ರಕ್ರಿಯೆಯು ಕೂಡ ಚಾಲನೆಯಲ್ಲಿದೆ. ಕಳೆದ ಬಾರಿಯಂತೆ ಈ ಬಾರಿಯೂ ಕೂಡ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಸಿದ್ಧತೆ ಕೈಗೊಳ್ಳಲಾಗಿದೆ. ಅದರಲ್ಲಿ ಆಗಸದಲ್ಲಿ ಹಾಸನ, ಯುವ ದಸರಾ, ಪ್ಯಾರಾ ಮೋಟರಿಂಗ್, ಭಕ್ತಾದಿಗಳಿಗೆ ಪ್ರವಾಸ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಇದರ ಜತೆಗೆ ಹಾಸನ ಕಪ್ ಕ್ರೀಡಾಕೂಟವನ್ನು ಕೂಡ ಆಯೋಜಿಸಲಾಗುವುದು ಎಂದು ಹೇಳಿದರು.
ಹಾಸನ ಉಪ ವಿಭಾಗಾಧಿಕಾರಿ ಮತ್ತು ಹಾಸನಾಂಬ ದೇಗುಲ ಆಡಳಿತಾಧಿಕಾರಿ ಮಾರುತಿ ಮಾತನಾಡಿ, ಕಳೆದ ಬಾರಿ ಕೆಲ ಕಚೇರಿಗಳಲ್ಲಿ ದೀಪಾಲಂಕಾರ ಮಾಡಿಕೊಂಡಿರಲಿಲ್ಲ. ಈ ಬಾರಿ ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ಸಾರ್ವಜನಿಕರ ಸಹಕಾರದಿಂದ ನಗರದಾದ್ಯಂತ ದಸರಾ ಮಾದರಿಯಲ್ಲಿ ದೀಪಾಲಂಕಾರ ಮಾಡಲಾಗುವುದು ಎಂದರು.
ಭಕ್ತಾದಿಗಳ ಅನುಕೂಲಕ್ಕಾಗಿ ಧರ್ಮದರ್ಶನ ಕ್ಯೂ ಹಾಗೂ ಇತರೆ ವಿಐಪಿ ಸಾಲುಗಳನ್ನು ಪ್ರತ್ಯೇಕವಾಗಿ ಮಾಡಲಾಗುವುದು. ಯಾವುದೇ ಲೋಪವಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಈ ಬಾರಿ ವಿಶೇಷವಾಗಿ ನಾಲ್ಕು ಸರ್ಕಾರಿ ರಜೆಗಳು ಬರುವುದರಿಂದ ಕಡ್ಡಾಯವಾಗಿ ಎರಡು ದಿನ ವಿಐಪಿ ಪಾಸುಗಳನ್ನು ತಡೆಹಿಡಿದು ಸಾರ್ವಜನಿಕ ದರ್ಶನಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಡಾ.ಬಿ.ಆರ್. ಪೂರ್ಣಿಮಾ, ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.