ಹಾಸನ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಅ.20 ರಿಂದ 26 ರವರೆಗೆ ಏಳು ದಿನಗಳ ಕಾಲ ಸುರಕ್ಷತಾ ಕ್ರಮಗಳೊಂದಿಗೆ ಪಟಾಕಿ ಮಾರಾಟ ಮಾಡುವಂತೆ ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಅವರು ಪಟಾಕಿ ವರ್ತಕರ ಸಂಘಕ್ಕೆ ಸೂಚನೆ ನೀಡಿದರು.
ದೀಪಾವಳಿ ಸಂದರ್ಭದಲ್ಲಿ ಪಟಾಕಿಗಳ ಮಾರಾಟಕ್ಕೆ ಅವಕಾಶ ಕಲ್ಪಿಸುವ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅ.20 ರಿಂದ 23 ರವರೆಗೆ ಪ್ರತಿದಿನ ಬೆಳಿಗ್ಗೆ 9.30 ರಿಂದ ರಾತ್ರಿ 7.30 ರವರೆಗೆ ಹಾಗೂ ಕಡೆಯ ಮೂರು ದಿನಗಳು ಬೆಳಿಗ್ಗೆ 9 ರಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಲಾಗುವುದು. ಸಾರ್ವಜನಿಕರಿಗೆ ಹಾಗೂ ಪರಿಸರಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಹೆಚ್ಚಿನ ನಿಗಾ ವಹಿಸಿ ವ್ಯಾಪಾರ ಮಾಡಬೇಕು ಎಂದು ನಿರ್ದೇಶನ ನೀಡಿದರು.
ಈ ಬಾರಿ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವುದರಿಂದ ಪಟಾಕಿ ಮಾರಾಟಕ್ಕೆ ಪರ್ಯಾಯ ಸ್ಥಳ ಗುರುತಿಸುವಂತೆ ಮತ್ತು ಎರಡು ಪ್ರತ್ಯೇಕ ಸ್ಥಳಗಳಲ್ಲಿ ಮಾರಾಟ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಮತ್ತು ಪಟಾಕಿ ವರ್ತಕರಿಗೆ ಸೂಚನೆ ನೀಡಿದರು.
ಪರಿಸರಕ್ಕೆ ಪೂರಕವಾದ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು. ಪ್ರತಿ ಮಳಿಗೆ ನಡುವೆ 8 ಅಡಿ ಜಾಗ ಬಿಟ್ಟಿರಬೇಕು. ಗಾಳಿ ಬೆಳಕಿನ ವ್ಯವಸ್ಥೆ ಇರಬೇಕು. ಅಗ್ನಿ ಅನಾಹುತ ತಡೆಗೆ ಎಲ್ಲಾ ಅಂಗಡಿಗಳಲ್ಲಿ ಡ್ರಂಗಳಲ್ಲಿ ನೀರು , ಮರಳು ಇರಿಸಿರಬೇಕು ಎಂದು ತಾಕೀತು ಮಾಡಿದರು.
ಪಟಾಕಿ ಮಾರಾಟದ ಸ್ಥಳದಲ್ಲಿ ಮತ್ತು ಸುತ್ತುಮುತ್ತ 50 ಮೀಟರ್ ದೂರದವರೆಗೆ ಧೂಮಪಾನ ಅಥವಾ ಬೆಂಕಿ ಹಚ್ಚುವುದನ್ನು ನಿಷೇಧಿಸಲಾಗಿದೆ. ಮಳಿಗೆಗಳ ಸುತ್ತ ಧೂಮಪಾನ ಮಾಡುವುದು, ಕಿಡಿ ಹೊತ್ತಿಸುವುದು ಮತ್ತು ಪಟಾಕಿ ಸಿಡಿಸುವುದನ್ನು ನಿಷಿದ್ಧಗೊಳಿಸಿರುವ ಸಂಬಂಧ ಸೂಚನಾ ಫಲಕ ಹಾಕಬೇಕು ಎಂದು ತಿಳಿಸಿದರು.
ಉಪ ವಿಭಾಗಾಧಿಕಾರಿ ಬಿ.ಎ ಜಗದೀಶ್, ನಗರಸಭೆ ಆಯುಕ್ತ ಪರಮೇಶ್ವರಪ್ಪ, ವಾರ್ತಾಧಿಕಾರಿ ವಿನೋದ್ ಚಂದ್ರ , ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸಿ.ಕೆ. ಹರೀಶ್ ಹಾಗು ವರ್ತಕರ ಸಂಘದ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.