ಅ.29 ರಿಂದ ಪುಣೆ ನಗರಕ್ಕೆ ವಿಮಾನ ಸೇವೆ
ಬೆಂಗಳೂರು: ಸತತ ಪ್ರಯತ್ನಗಳ ಫಲವಾಗಿ ಇಂಡಿಗೋ ಏರ್‌ಲೈನ್ಸ್ ಸಂಸ್ಥೆಯು ದೆಹಲಿ ಮತ್ತು ಬೆಳಗಾವಿ ನಡುವೆ ಅಕ್ಟೋಬರ್ 1 ರಿಂದ ಪ್ರತಿದಿನ ವಿಮಾನಯಾನ ಸಂಚಾರದ ಸೇವೆಯನ್ನು ಪ್ರಾರಂಭಿಸಲು ಸಮ್ಮತಿಸಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಇದು 2ನೇ ರಾಜಧಾನಿ ಜನತೆಯ ಕೈಗಾರಿಕೋದ್ಯಮಿಗಳಿಗೆ, ವೈದ್ಯರಿಗೆ, ವರ್ತಕರಿಗೆ, ವಿವಿಧ ಗಣ್ಯರಿಗೆ, ಪ್ರವಾಸಿಗರಿಗೆ ಅನುಕೂಲವಾಗಲಿದೆ ಎಂದು ಕಡಾಡಿ ಅವರು ತಿಳಿಸಿದ್ದಾರೆ. ಜತೆಗೆ ಅಕ್ಟೋಬರ್ 29 ರಿಂದ ಸ್ಟಾರ್ ಏರ್‌ಲೈನ್ಸ್ ಸಂಸ್ಥೆಯು ಪುಣೆ-ಬೆಳಗಾವಿ ನಡುವೆ ಪ್ರತಿದಿನ ವಿಮಾನಯಾನ ಸಂಚಾರ ಸೇವೆಯನ್ನು ಪ್ರಾರಂಭಿಸಲಿದೆ ಎಂದೂ ಹೇಳಿದ್ದಾರೆ. ಅಕ್ಟೋಬರ್ 31 ರಿಂದ ಪುಣೆ-ಬೆಳಗಾವಿ ನಡುವೆ ಇಂಡಿಗೋ ಏರ್‌ಲೈನ್ಸ್ ಸಂಸ್ಥೆಯು ವಾರದಲ್ಲಿ 3 ದಿನ ( ಮಂಗಳವಾರ, ಗುರುವಾರ ಮತ್ತು ಶನಿವಾರ) ವಿಮಾನಯಾನ ಸಂಚಾರ ಸೇವೆಯನ್ನು ಪ್ರಾರಂಭಿಸಲಿದೆ ಎಂದು ಕಡಾಡಿ ಹೇಳಿದ್ದಾರೆ. ಬೆಳಗಾವಿಯಿಂದ ದೆಹಲಿ ಹಾಗೂ ಪುಣೆ ನಗರಗಳಿಗೆ ವಿಮಾನಯಾನ ಸೇವೆ ಪ್ರಾರಂಭಿಸಿರುವ ಇಂಡಿಗೋ ಮತ್ತು ಸ್ಟಾರ್ ಏರ್‌ಲೆನ್ಸ್ ಸಂಸ್ಥೆಗಳ ಆಡಳಿತ ಮಂಡಳಿ ನಿರ್ದೇಶಕರಿಗೆ ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುವೆ ಎಂದು ಕಡಾಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.