ಚಾಮರಾಜನಗರ: ಸುಪ್ರಿಂಕೋರ್ಟ್ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ಪ್ರಕರಣವನ್ನು ಖಂಡಿಸಿ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ಅ.18ರಂದು ಸ್ವಯಂ ಬಂದ್ ಮತ್ತು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುತ್ತದೆ ಎಂದು ಸಮಿತಿಯ ಸದಸ್ಯ ಅಯ್ಯನಪುರ ಶಿವಕುಮಾರ್ ತಿಳಿಸಿದರು.
ಸನಾತನ ಸಂಸ್ಕೃತಿಯ ವಕೀಲ ರಾಕೇಶ್ ಕಿಶೋರ್ ನ್ಯಾಯಾಧೀಶರನ್ನು ನಿಂದಿಸಿದ್ದಾರೆ. ಅಲ್ಲದೇ, ಅವರತ್ತ ಶೂ ಎಸೆದಿದ್ದಾರೆ. ಇದು ಸಮಾಜದ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ನಡೆಸಿರುವ ಹುನ್ನಾರವಾಗಿದೆ. ಈ ಘಟನೆಯನ್ನು ವಿರೋಧಿಸಿ ಅ.18ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಚಾಮರಾಜನಗರ ಸ್ವಯಂ ಬಂದ್ದ ಮಾಡಲಾಗುತ್ತದೆ. ಮಧ್ಯಾಹ್ನದ ವೇಳೆಗೆ ಶ್ರೀಭುವನೇಶ್ವರಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುತ್ತದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೈಸೂರು-ಚಾಮರಾಜನಗರ ನಾಯಕರ ಸಂಘದ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ನ್ಯಾಯಾಂಗ ಪ್ರಜಾಪ್ರಭುತ್ವವನ್ನು ಬಲ ಪಡಿಸುತ್ತದೆ. ನ್ಯಾಯಮೂರ್ತಿಗಳ ತೀರ್ಪನ್ನು ಕಾನೂನು ಬದ್ಧವಾಗಿ ಪ್ರಶ್ನಿಸುವುದನ್ನು ಬಿಟ್ಟು ಶೂ ಎಸೆದಿರುವುದು ೋರ ದುರಂತ. ವಕೀಲನಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್ ಮಾತನಾಡಿ, ಇದೊಂದು ಮಹಾ ದುರ್ಘಟನೆ. ಕಾನೂನು ತಿಳಿದಿರುವ ವಕೀಲನೇ ಕೃತ್ಯವೆಸಗಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಕಕ್ಷಿದಾರನಿಗೆ ನ್ಯಾಯ ಕೊಡಿಸಬೇಕಾದ ವಕೀಲನೇ ಹೀಗೆ ಮಾಡಿದರೆ ಸಾಮಾನ್ಯರ ಗತಿಯೇನು?. ಮುಂದೆ ಇಂತಹ ಘಟನೆಗಳು ನಡೆಯಬಾರದು. ವಕೀಲ ರಾಕೇಶ್ ಕಿಶೋರ್ ವಿರುದ್ಧ ಕಠಿಣ ಕ್ರಮವಾಗಬೇಕು. ಈ ನಿಟ್ಟಿನಲ್ಲಿ ಬಂದ್‌ಗೆ ಸರ್ವರೂ ಬೆಂಬಲ ನೀಡಬೇಕೆಂದು ಕೋರಿದರು.
ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಅಬ್ರಾಹರ್ ಅಹಮದ್ ಮಾತನಾಡಿ, ಬಂದ್‌ಗೆ ಎಸ್‌ಡಿಪಿಐ ಸಂಪೂರ್ಣ ಬೆಂಬಲ ನೀಡಿದೆ. ಮನುವಾದಿ ಮನಸ್ಥಿತಿ ನಾಶವಾಗಬೇಕು. ಸಂವಿಧಾನದ ಆಶಯವೇ ಮುಖ್ಯವಾಗಬೇಕು. ಮನುವಾದಿಗಳೇ ಶ್ರೇಷ್ಠ ಎನ್ನುವ ಮನಸ್ಥಿತಿಯನ್ನು ಮನೆಯಲ್ಲಿ ಬಿಟ್ಟು, ವೈಯಕ್ತಿಕ ಹಿತಾಸಕ್ತಿಗಿಂತ ದೇಶದ ಹಿತಾಸಕ್ತಿ ಮುಖ್ಯವಾಗಬೇಕೆಂದರು.
ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಸ್‌ಪಿಕೆ ಉಮೇಶ್ ಮಾತನಾಡಿ, ಬಂದ್‌ಗೆ ವಿವಿಧ ಸಂಘ-ಸಂಸ್ಥೆಗಳು, ಹೋಟೇಲ್, ಚಿತ್ರಮಂದಿರ ಮಾಲೀಕರು, ಬಸ್, ಆಟೋ, ಲಾರಿ, ಕಾರು ಚಾಲಕರು, ತರಕಅರಿ ಮಾರಾಟಗಾರರು, ವ್ಯಾಪಾರಸ್ಥರು, ರೈತರು, ದಲಿತ ಪರ ಮತ್ತು ಪ್ರಗತಿ ಪರ ಸಂಘಟನೆಗಳ ಹೋರಾಟಗಾರರು, ಬೆಂಬಲ ನೀಡಬೇಕೆಂದು ಮನವಿ ಮಾಡಿದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಚಿಕ್ಕಮಹದೇವ್ ಮಾತನಾಡಿ, ಸನಾತನ ಮನಸ್ಥಿತಿಯ ವಕೀಲನನ್ನು ದೇಶದಿಂದ ಗಡಿಪಾರು ಮಾಡಬೇಕು. ನಮಗ ಬದುಕು ಕಟ್ಟಿಕೊಟ್ಟಿರುವ ಸಂವಿಧಾನದ ಸಂರಕ್ಷಣೆಗಾಗಿ ಬಂದ್‌ಗೆ ಕರೆ ನೀಡಲಾಗಿದೆ ಎಂದರು. ಕನ್ನಡ ಪರ ಸಂಘಟನೆಗಳ ಮುಖಂಡ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಇದು ದೇಶದ ಸಮಗ್ರತೆ, ಐಕ್ಯತೆಯ ಪ್ರಶ್ನೆಯಾಗಿದೆ. ಬೇರೆ ನ್ಯಾಯಮೂರ್ತಿಗಳಿಗೆ ಈ ಪರಿಸ್ಥಿತಿ ಬರಬಾರದು. ಬಂದ್‌ಗೆ ಬೆಂಬಲ ನೀಡಿ ಇಂತಹ ಕೃತ್ಯವನ್ನು ಪ್ರತಿಯೊಬ್ಬ ನಾಗರೀಕನೂ ಖಂಡಿಸಬೇಕೆಂದು ಕೇಳಿಕೊಂಡರು. ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಮಹದೇವು ಮಾತನಾಡಿ, ಸರ್ವಜನಾಂಗದ ಮುಖಂಡರು ಸಭೆ ಸೇರಿ ಬಂದ್‌ಗೆ ಕರೆ ನೀಡಿದ್ದೇವೆ ಎಂದರು. ಗೋಷ್ಟಿಯಲ್ಲಿ ಮುಖಂಡ ನಾಗಯ್ಯ ಇದ್ದರು.