ಜಿಲ್ಲೆ

ಅ.18ರಂದು ಅಂಗವಿಲಕರ ಉದ್ಯೋಗ ಮೇಳ

Hassan - Ramesh H R

ಹಾಸನ: ಸಮರ್ಥನಂ ಅಂಗವಿಕಲರ ಸಂಸ್ಥೆ ಮತ್ತು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲಿಕರಣ ಇಲಾಖೆ ಸಹಯೋಗದಲ್ಲಿ ಅಂಗವಿಕಲರಿಗೆ ಉದ್ಯೋಗ ಮೇಳವನ್ನು ಅ.18ರಂದು ಬೆಳಗ್ಗೆ 9ಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಮರ್ಥನಂ ಅಂಗವಿಕಲರ ಸಂಸ್ಥೆಯ ಬೆಂಗಳೂರು ಕೇಂದ್ರ ಮುಖ್ಯಸ್ಥ ಸುಭಾಷ್ ಚಂದ್ರ ತಿಳಿಸಿದರು.

ಉದ್ಯೋಗ ಮೇಳದಲ್ಲಿ ಹಾಸನ, ಮೈಸೂರು ಮತ್ತು ಬೆಂಗಳೂರು ಸೇರಿದಂತೆ ಸುಮಾರು 10ರಿಂದ 15 ಕಂಪನಿಗಳು ಭಾಗವಹಿಸಲಿವೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಯಾವುದೇ ಡಿಪ್ಲೊಮಾ ಮತ್ತು ಪದವಿಯಲ್ಲಿ ಉತ್ತೀರ್ಣರಾಗಿರುವ 18 ರಿಂದ 35 ವರ್ಷದ ಒಳಗಿನ ದೈಹಿಕ, ದೃಷ್ಟಿ, ವಾಕ್ ಮತ್ತು ಶ್ರವಣ ನ್ಯೂನತೆ ಹೊಂದಿರುವ ಅಂಗವಿಕಲರು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಉದ್ಯೋಗ ಮೇಳದಲ್ಲಿ ಭಾಗವಹಿಸುವವರು ಬಯೋಡೇಟಾದ ಕನಿಷ್ಠ 5 ಪ್ರತಿಗಳು, ಕನಿಷ್ಠ 2 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು, ಶೈಕ್ಷಣಿಕ ಅರ್ಹತೆಯ ನಕಲು ಪ್ರತಿಗಳು, ವಿಶೇಷಚೇತನರ ಗುರುತಿನ ಚೀಟಿ, ಯುಡಿಐಡಿ ಪ್ರಮಾಣಪತ್ರ ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು ನೋಂದಣಿ ವೇಳೆ ಸಲ್ಲಿಸಬೇಕು ಎಂದರು.

ಸಂಸ್ಥೆಯ ಪ್ಲೇಸ್‌ಮೆಂಟ್ ಆಫೀಸರ್ ವೀರಭದ್ರ ಪಾಟೀಲ್ ಮಾತನಾಡಿ, 1997ರಿಂದ ಸಮರ್ಥನಂ ಅಂಗವಿಕಲರ ಏಳಿಗೆಗಾಗಿ ಕೆಲಸ ಮಾಡುತ್ತಿದೆ. ಅಂಗವಿಕಲರಿಗೆ ಮೂರು ತಿಂಗಳ ತರಬೇತಿ ನೀಡಿ ಅವರಿಗೆ ಕೆಲಸ ಕೊಡಿಸುತ್ತೇವೆ. ದೇಶಾದ್ಯಂತ ಸಂಸ್ಥೆ 12 ಕೇಂದ್ರಗಳನ್ನು ಹೊಂದಿದೆ. ಗ್ರಾಮಾಂತರ ಪ್ರದೇಶದ ಅಂಗವಿಕಲರಿಗೂ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದ ಈ ಮೇಳ ಆಯೋಜಿಸಲಾಗಿದೆ ಎಂದರು.