ಮೈಸೂರು: ಪ್ರಸ್ತಕ ಸಾಲಿನ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅಕ್ಟೋಬರ್ 15ರಿಂದ 24ರವರೆಗೆ ಜರುಗಲಿದೆ. ಈ ಸಂಬಂಧ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಗುರುವಾರ ದಸರಾ ಮಹೋತ್ಸವದ ಮೊದಲ ಸಭೆ ನಡೆಸಿದರು.
ಮೈಸೂರು ಅರಮನೆ ಮಂಡಳಿ ಕಚೇರಿಯ ಸಭಾಂಗಣದಲ್ಲಿ ದಸರಾ ಪೂರ್ವಭಾವಿ ಸಿದ್ಧತೆ ಸಭೆ ಜರುಗಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯ ದಸರಾ ಉನ್ನತ ಮಟ್ಟದ ಸಮಿತಿ ಸಭೆಗೆ ಮಾಹಿತಿ ನೀಡುವ ಸಂಬಂಧ ಚರ್ಚಿಸಲಾಯಿತು.
ಅಕ್ಟೋಬರ್ 15ರಂದು ದಸರಾ ಉದ್ಘಾಟನೆಗೊಳ್ಳಲಿದ್ದು, 24ರಂದು ವೈಭವದ ಜಂಬೂಸವಾರಿ ಮೆರವಣಿಗೆ ನಡೆಯಲಿದೆ. ವಿಧಾನಸಭೆ ಅಧಿವೇಶನ ಮುಗಿದ ಬಳಿಕ ದಸರಾ ಉನ್ನತ ಮಟ್ಟದ ಸಮಿತಿ ಸಭೆ ನಡೆಯುವ ಸಾಧ್ಯತೆ ಇದೆ. ದಸರಾ ಉನ್ನತ ಮಟ್ಟದ ಸಮಿತಿ ಸಭೆಗೂ ಮುನ್ನ ಅಧಿಕಾರಿಗಳು ಈ ವರ್ಷದ ದಸರಾ ಮಹೋತ್ಸವದ ಕಾರ್ಯಕ್ರಮಗಳ ಮಾಹಿತಿ ಕೊಡಬೇಕು. ದಸರಾಕ್ಕೆ ಅಗತ್ಯವಾದ ಅನುದಾನ, ಅಭಿವೃದ್ಧಿ ಕಾರ್ಯಗಳಿಗೆ ಬೇಕಾದ ಅನುದಾನದ ಮಾಹಿತಿ ನೀಡಬೇಕು ಎಂದು ಡಿಸಿ ನಿರ್ದೇಶನ ನೀಡಿದರು.
ವಿಸ್ತೃತ ಮಾಹಿತಿಗೆ ಸೂಚನೆ: ದಸರಾ ಮೊದಲ ಸಭೆಯಲ್ಲಿ ಸಾರ್ವಜನಿಕ ಕಾರ್ಯಕ್ರಮ, ವಸ್ತುಪ್ರದರ್ಶನ, ಅರಮನೆ ಕಾರ್ಯಕ್ರಮ, ಗಣ್ಯರ ಭೇಟಿ, ಉದ್ಘಾಟಕರು ಸೇರಿದಂತೆ ದಸರಾ ಉತ್ಸವಕ್ಕೆ ಸಂಬಂಧಿಸಿದ ವಿಸ್ತೃತ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜತೆಗೆ ದಸರಾ ಉದ್ಘಾಟನೆ, ಮೆರವಣಿಗೆ, ನಂದಿಧ್ವಜ ಪೂಜೆ, ಪುಷ್ಪಾರ್ಚನೆ, ಜಂಬೂಸವಾರಿ ಮೆರವಣಿಗೆ ಸಮಯಗಳ ಬಗ್ಗೆಯೂ ಚರ್ಚಿಸಲಾಯಿತು. ಪ್ರತಿ ವರ್ಷದಂತೆ ಸಾಂಪ್ರದಾಯಿಕ ದಸರಾ ಆಚರಣೆಗೆ ಅನುಸರಿಸುತ್ತಿದ್ದ ಮಾದರಿಗಳ ಕುರಿತು ಡಿಸಿ ಮಾಹಿತಿ ಪಡೆದುಕೊಂಡರು.
ಗಜಪಡೆ ಕುರಿತು ಚರ್ಚೆ: ಇದೇ ವೇಳೆ ಗಜಪಡೆ ಕುರಿತು ಸಮಾಲೋಚಿಸಲಾಯಿತು. ಸಾಮಾನ್ಯವಾಗಿ ದಸರಾ ಆರಂಭಕ್ಕೆ 3 ತಿಂಗಳು ಮುಂಚೆ ಗಜಪಡೆಯನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಗುತ್ತದೆ. ಬಳಿಕ ಮೈಸೂರಿನಲ್ಲಿ ತಾಲೀಮು ನೀಡಲಾಗುತ್ತದೆ.
ಮೊದಲ ಹಂತದಲ್ಲಿ ವಿವಿಧ ಆನೆ ಶಿಬಿರಗಳಿಂದ 12 ಆನೆಗಳನ್ನು ಕರೆತರಲಾಗುತ್ತದೆ. ಇವುಗಳೊಟ್ಟಿಗೆ ಮಾವುತ, ಕಾವಾಡಿ ಕುಟುಂಬಗಳು, ಅರಣ್ಯ ಇಲಾಖೆ ಅಧಿಕಾರಿಗಳು ತಂಡ ಅರಮನೆ ಆವರಣದಲ್ಲಿ ಬೀಡುಬಿಡಲಿದ್ದಾರೆ. ಆನೆಗಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಅಧಿವೇಶನದ ಬಳಿಕ ನಡೆಯಲಿರುವ ದಸರಾ ಉನ್ನತ ಮಟ್ಟದ ಸಭೆಯಲ್ಲಿ ಮೈಸೂರು ಭಾಗದ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಮೈಸೂರು ಜಿಲ್ಲಾಡಳಿತ, ನಗರ ಪಾಲಿಕೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ದಸರಾ ಮಹೋತ್ಸವವನ್ನು ಸಂಘಟಿಸಲಾಗುತ್ತದೆ.
ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ, ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ ರೆಡ್ಡಿ, ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಭಾಗವಹಿಸಿದ್ದರು.