ಸದೇಶ್ ಕಾರ್ಮಾಡ್ ಮೈಸೂರು
ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಇನ್ನೇನು ಸದ್ಯದಲ್ಲಿಯೇ ಎದುರಾಗಲಿದೆ. ರಾಜಕೀಯ ಮಹತ್ವಕಾಂಕ್ಷೆ ಹೊಂದಿರುವವರಿಗೆ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ರಾಜಕೀಯದ ಮಹತ್ವದ ಮೆಟ್ಟಿಲು. ಜಿಲ್ಲೆಯ ಕೆಲವು ನೇತಾತರರು ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿ ವಿಧಾನಸಭೆಯನ್ನೂ ಪ್ರವೇಶಿಸಿ ಗಮನ ಸೆಳೆದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಗೊಳ್ಳುವ ಮುನ್ನ ಆಗಿನ ತಾಲೂಕು ಬೋರ್ಡ್ ಸದಸ್ಯರಾಗಿದ್ದರು. ನಂತರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 1983ರಲ್ಲಿ ಶಾಸಕರಾಗಿ ಆಯ್ಕೆಗೊಂಡರು. ಆ ನಂತರ ಸಚಿವರಾಗಿ, ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ, ಉಪ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿ ಇದೀಗ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಗೆಲುವು ಸಾಧಿಸುವವರು ಮುಂದೆ ಯಾವ ಉನ್ನತ ಹುದ್ದೆ ಅಲಂಕರಿಸುತ್ತಾರೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಒಟ್ಟಾರೆ ರಾಜಕೀಯವಾಗಿ ಬೆಳವಣಿಗೆ ಹೊಂದಲು ಈ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ.
1994ರಲ್ಲಿ ಹುಣಸೂರು ಕ್ಷೇತ್ರದಿಂದ ಸಿ.ಎಚ್. ವಿಜಯಶಂಕರ್ ಶಾಸಕರಾಗಿ ಆಯ್ಕೆಗೊಂಡಿದ್ದರು. ನಂತರ 1998ರಲ್ಲಿ ಎದುರಾದ ಲೋಕಸಭಾ ಚುನಾವಣೆಯಲ್ಲಿ ಸಿ.ಎಚ್. ವಿಜಯಶಂಕರ್ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ತೆರವುಗೊಂಡ ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜಿ.ಟಿ. ದೇವೇಗೌಡ ಗೆಲುವು ಸಾಧಿಸುವ ಮೂಲಕ ವಿಧಾನಸಭೆ ಪ್ರವೇಶಿಸಿ ದ್ದರು. ಇದಕ್ಕೂ ಮುನ್ನ ಜಿ.ಟಿ. ದೇವೇಗೌಡ ಜಿಲ್ಲಾ ಪರಿಷತ್ ಸದಸ್ಯರಾಗಿ, ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ತಿ.ನರಸೀಪುರ ಕ್ಷೇತ್ರದ ಶಾಸಕ ಅಶ್ವಿನ್‌ಕುಮಾರ್ 2018ರ ಚುನಾವಣೆಯಲ್ಲಿ ತಿ.ನರಸೀಪುರ ಕ್ಷೇತ್ರದಿಂದ ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ವಿರುದ್ಧ ಸ್ಪರ್ಧಿಸಿ ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಇದೇ ರೀತಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಅನಿಲ್ ಚಿಕ್ಕಮಾದು ಎಚ್.ಡಿ. ಕೋಟೆ ಕ್ಷೇತ್ರದಿಂದ 2018ರಲ್ಲಿ ಗೆಲುವು ಸಾಧಿಸಿ ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.
ಅನಿಲ್ ಚಿಕ್ಕಮಾದು ಅವರ ತಂದೆ ಚಿಕ್ಕಮಾದು ಸಹ ಜಿಲ್ಲಾ ಪರಿಷತ್ ಸದಸ್ಯರಾಗಿದ್ದು, ನಂತರ ವಿಧಾನಸಭೆ ಪ್ರವೇಶಿಸಿದ್ದರು. 1989ರ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಪುತ್ರಿ ಚಂದ್ರಪ್ರಭಾ ಅರಸ್ ಹುಣಸೂರು ಕ್ಷೇತ್ರದಿಂದ ಆಯ್ಕೆಗೊಂಡರು. ನಂತರ ಅವರು 1991ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಹೀಗಾಗಿ, ತೆರವುಗೊಂಡ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಚಿಕ್ಕಮಾದು ಗೆಲುವು ಸಾಧಿಸಿದ್ದರು.
ಪಿರಿಯಾಪಟ್ಟಣ ಕ್ಷೇತ್ರದಿಂದ 1999ರಲ್ಲಿ ಶಾಸಕರಾಗಿ ಆಯ್ಕೆಗೊಂಡ ಎಚ್.ಸಿ. ಬಸವರಾಜ್ ಅದಕ್ಕೂ ಮುನ್ನ ಜಿಲ್ಲಾ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದ ಸುನೀತಾ ವೀರಪ್ಪಗೌಡ ಬನ್ನೂರು ಕ್ಷೇತ್ರದಿಂದ (ಪ್ರಸ್ತುತ ಈ ಕ್ಷೇತ್ರ ಅಸ್ತಿತ್ವದಲ್ಲಿ ಇಲ್ಲ) 2004ರಲ್ಲಿ ಶಾಸಕರಾಗಿ ಆಯ್ಕೆಗೊಂಡರು. ಆ ನಂತರ ಮತ್ತೆ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಗೊಂಡು ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ಪಿರಿಯಾಪಟ್ಟಣ ಶಾಸಕ, ಹಾಲಿ ಸಚಿವ ಕೆ. ವೆಂಕಟೇಶ್ 1978ರಲ್ಲಿ ತಾಲೂಕು ಬೋರ್ಡ್ ಅಧ್ಯಕ್ಷರಾಗುವ ಮೂಲಕ ರಾಜಕೀಯ ಜೀವನ ಪ್ರಾರಂಭಿಸಿದರು. ನಂತರ ಅವರು 1985ರಲ್ಲಿ ಪಿರಿಯಾಪಟ್ಟಣ ಕ್ಷೇತ್ರದಿಂದ ಆಯ್ಕೆಗೊಂಡು ವಿಧಾನಸಭೆ ಪ್ರವೇಶಿಸಿದರು.
ಕಳೆದ ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ರವಿಶಂಕರ್ 2018ರ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್.ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜೆಡಿಎಸ್‌ನ ಸಾ.ರಾ. ಮಹೇಶ್ ಎದುರು ಸೋಲು ಅನುಭವಿಸಿದ್ದರು. ಈ ಬಾರಿ ಸಾ.ರಾ. ಮಹೇಶ್ ವಿರುದ್ಧ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ.
ಈ ರೀತಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಸದಸ್ಯರಾಗಿ ಆಯ್ಕೆಗೊಂಡು ಜನಸೇವೆ ಹಾಗೂ ಪಕ್ಷದ ಸಂಘಟನೆಯ ಮೂಲಕ ಗಮನ ಸೆಳೆಯುವ ಹಲವರು ರಾಜಕೀಯವಾಗಿ ಉನ್ನತ ಸ್ಥಾನಗಳನ್ನು ಪಡೆಯುವ ಎಲ್ಲ ಸಾಧ್ಯತೆಗಳು ಇವೆ. ಈ ಕಾರಣಕ್ಕೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ರಾಜಕೀಯ ಮಹತ್ವಕಾಂಕ್ಷ ಇರುವ ಹಲವರ ಪಾಲಿಗೆ ಮಹತ್ವದ್ದಾಗಿದೆ.
ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಾವಧಿ ಮುಕ್ತಾಯಗೊಂಡು ಎರಡು ವರ್ಷ ಕಳೆದರೂ ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ಚುನಾಣೆ ನಡೆಸಿರಲಿಲ್ಲ. ಇದೀಗ ಹೊಸ ಸರ್ಕಾರ ರಚನೆಯಾಗಿದ್ದು, ಶೀಘ್ರದಲ್ಲಿಯೇ ಚುನಾವಣೆ ನಡೆಯುವ ಸಾಧ್ಯತೆ ಇದೆ. ಕರ್ನಾಟಕ ಪಂಚಾಯತ್‌ರಾಜ್ ಸೀಮಾ ನಿರ್ಣಯ ಆಯೋಗ ಕ್ಷೇತ್ರ ಪುನರ್ವಿಂಗಡಣೆ ಕಾರ್ಯ ಪೂರ್ಣಗೊಳಿಸಿದೆ. ಮೀಸಲಾತಿ ವಿಚಾರ ಸದ್ಯ ಹೈಕೋರ್ಟ್‌ನಲ್ಲಿದ್ದು, ಮೇ 29 ರಂದು ವಿಚಾರಣೆಗೆ ಬರಲಿದೆ. ಹೈಕೋರ್ಟ್ ನೀಡುವ ತೀರ್ಪಿನ ಆಧಾರದ ಮೇಲೆ ಚುನಾವಣೆಯ ಅಧಿಸೂಚನೆ ನಿಂತಿದೆ.
ಜಿಲ್ಲೆಯಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಪ್ರತಿಷ್ಠೆಯ ಕಣವಾಗಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಹೆಚ್ಚಿನ ಪ್ರಾಬಲ್ಯ ಹೊಂದಿವೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಿಲ್ಲೆಯಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗಳಲ್ಲಿ ಅಧಿಕಾರವನ್ನು ಪಡೆಯುವ ಗುರಿಯನ್ನು ಕಾಂಗ್ರೆಸ್ ಹೊಂದಿದೆ. ಅದೇ ರೀತಿ ಜಿಲ್ಲೆಯಲ್ಲಿ ಪ್ರಾಬಲ್ಯ ಹೊಂದಿರುವ ಜೆಡಿಎಸ್ ಮತ್ತೊಮ್ಮೆ ತನ್ನ ಪ್ರಾಬಲ್ಯ ಸಾಬೀತು ಪಡಿಸಲು ಸಿದ್ಧತೆ ನಡೆಸುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಮಂಕಾಗಿರುವ ಬಿಜೆಪಿ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಹೊಸ ಚೈತನ್ಯ ಪಡೆಯಲು ರಾಜಕೀಯ ತಂತ್ರಗಾರಿಕೆ ರೂಪಿಸುತ್ತಿದೆ.