ಜಿಲ್ಲೆ

ಜಿ.ಪಂ. ಸದಸ್ಯರ ಧರಣಿ ಅಂತ್ಯ

Dharwad

ಧಾರವಾಡ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿ.ಪಂ. ಅಧ್ಯಕ್ಷೆ, ಉಪಾಧ್ಯಕ್ಷ ಹಾಗೂ ಸದಸ್ಯರು 14 ದಿನಗಳಿಂದ ಜಿ.ಪಂ. ಕಚೇರಿಯಲ್ಲಿ ನಡೆಸುತ್ತಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹ ಶುಕ್ರವಾರ ಅಂತ್ಯಗೊಂಡಿದೆ.

ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ ಅವರು ಶುಕ್ರವಾರ ಧರಣಿ ಸ್ಥಳಕ್ಕೆ ಭೇಟಿ ನೀಡಿ ಜನಪ್ರತಿನಿಧಿಗಳ ಅಹವಾಲು ಆಲಿಸಿದರು. ಸದಸ್ಯರ ಧರಣಿ ನ್ಯಾಯಸಮ್ಮತವಾಗಿದೆ. ಅವರ ಬೇಡಿಕೆಗಳನ್ನು ಈಡೇರಿಸಿ ಹಕ್ಕುಗಳನ್ನು ಕೊಡಿಸಲು ಧರಣಿಯ ವಿಷಯವನ್ನು ವಿಧಾನ ಪರಿಷತ್​ನಲ್ಲಿ ಪ್ರಸ್ತಾಪಿಸುತ್ತೇನೆ. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಗಮನಕ್ಕೂ ತರುತ್ತೇನೆ ಎಂದು ಭರವಸೆ ನೀಡಿದರು. ಇದಕ್ಕೆ ಒಪ್ಪಿದ ಸದಸ್ಯರು ಧರಣಿ ವಾಪಸ್ ಪಡೆಯುವುದಾಗಿ ಘೊಷಿಸಿದರು.

ಶೆಟ್ಟರ್ ಬಾರದ್ದಕ್ಕೆ ಅಸಮಾಧಾನ: ಪ್ರವಾಹದಿಂದ ಜಿಲ್ಲೆಯಲ್ಲಿ 21,090 ಮನೆಗಳಿಗೆ ಹಾನಿಯಾಗಿದೆ. 5,70,000 ಎಕರೆ ಬೆಳೆ ಹಾನಿಯಾಗಿದ್ದು, ಮೂವರ ಪ್ರಾಣಹಾನಿ ಹಾಗೂ 234 ಜಾನುವಾರುಗಳು ಮೃತಪಟ್ಟಿವೆ. ನೆರೆ ಹಾವಳಿ ಪರಿಹಾರ ತಾರತಮ್ಯ, ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ 14 ದಿನಗಳಿಂದ ಧರಣಿ ನಡೆಸುತ್ತಿದ್ದರೂ ಜಿಲ್ಲೆಯ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಭೇಟಿ ಮಾಡಿ ಮಾತನಾಡಿಸಿಲ್ಲ. ಅವರು ಮುಖ್ಯಮಂತ್ರಿಯಾದವರು, ಹಿರಿಯ ರಾಜಕಾರಣಿ. ಜನಪ್ರತಿನಿಧಿಗಳನ್ನು ನಿರ್ಲಕ್ಷಿಸುವುದು ಸಚಿವ ಶೆಟ್ಟರ್ ವ್ಯಕ್ತಿತ್ವಕ್ಕೆ ತಕ್ಕ ವರ್ತನೆ ಅಲ್ಲ. ಬಾಂಬೆ ರಾಜಕಾರಣ ಮಾಡಿ ಹಿಂಬಾಗಿಲಿನಿಂದ ಅಧಿಕಾರ ಹಿಡಿದ ಬಿಜೆಪಿ, ಪಂಚೇಂದ್ರಿಯ ಇಲ್ಲದ ಸರ್ಕಾರ. ಜನರ ಕಲ್ಯಾಣದ ಚಿಂತನೆ ಇಲ್ಲದ ದಪ್ಪ ಚರ್ಮದ ಸರ್ಕಾರ ಎಂದು ಎಸ್.ಆರ್. ಪಾಟೀಲ ಕಿಡಿ ಕಾರಿದರು.

ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರು ಈ ಹಿಂದೆಯೇ ಕೆಲ ದಾಖಲೆ ಸಮೇತ ತಾರತಮ್ಯ ಆಗಿರುವುದನ್ನು ಗಮನಕ್ಕೆ ತಂದಿದ್ದಾರೆ. ಪರಿಹಾರ ವಿಷಯದಲ್ಲಿ ತಾರತಮ್ಯ ಆಗಿರುವುದು ಸತ್ಯ. ರಾಜ್ಯದ 22 ಜಿಲ್ಲೆಗಳ 103 ತಾಲೂಕಿನಲ್ಲಿ ನೆರೆ ಹಾನಿ ಆಗಿದೆ. ಈ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಸದಸ್ಯರಿಗೆ ಧಾರವಾಡ ಜಿ.ಪಂ. ಸದಸ್ಯರ ಹೋರಾಟ ಪ್ರೇರಣೆಯಾಗಲಿ ಎಂದರು.

ಜಿ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ಉಪಾಧ್ಯಕ್ಷ ಶಿವಾನಂದ ಕರಿಗಾರ, ಇತರರು, ನೆರೆ ಪರಿಹಾರದ ತಾರತಮ್ಯದ ವಿವರಣೆ ನೀಡಿದರು.

ಶಾಸಕ ಪ್ರಸಾದ ಅಬ್ಬಯ್ಯ, ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ಮಹಾನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಮಾಜಿ ಸಚಿವ ಆಲ್ಕೋಡ ಹನುಮಂತಪ್ಪ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತವ್ವ ಗುಜ್ಜಳ, ಮುಖಂಡರಾದ ಶರಣಪ್ಪ ಕೊಟಗಿ, ಸದಸ್ಯರಾದ ಚನ್ನಬಸಪ್ಪ ಮಟ್ಟಿ, ಕಲ್ಲಪ್ಪ ಪುಡಕಲಕಟ್ಟಿ, ಉಮೇಶ ಕುಸುಗಲ್, ಕರೆಪ್ಪ ಮಾದರ, ಅಣ್ಣಪ್ಪ ದೇಸಾಯಿ, ತಾ.ಪಂ. ಅಧ್ಯಕ್ಷ ಈರಣ್ಣ ಏಣಗಿ, ತಾ.ಪಂ., ಗ್ರಾ.ಪಂ. ಸದಸ್ಯರು, ಪೈಲ್ವಾನರು, ರೈತರು ಉಪಸ್ಥಿತರಿದ್ದರು.