ಜಿಲ್ಲೆ

ಬಯಲು ಶೌಚ ಮುಕ್ತ ಸಮಾಜ ನಿರ್ಮಿಸೋಣ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಬಯಲು ಶೌಚ ಪದ್ಧತಿಯಿಂದ ದೂರ ಸರಿದು ಪ್ರತಿಯೊಬ್ಬರು ಮನೆಯಲ್ಲಿನ ಶೌಚಗೃಹ ಬಳಸುವ ಮೂಲಕ ಬಯಲು ಶೌಚ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಾಂತಕುಮಾರ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ವತಿಯಿಂದ ದೇವನಹಳ್ಳಿ ತಾಲೂಕು ಕುಂದಾಣ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಶೌಚ ದಿನದಲ್ಲಿ ಮಾತನಾಡಿದರು. ವಿಶ್ವ ಶೌಚ ದಿನದ ಅಂಗವಾಗಿ ನ.19 ರಿಂದ ಡಿ.10 ರವರೆಗೆ ನಡೆಯುವ ’ನಮ್ಮ ಶೌಚಾಲಯ, ನಮ್ಮ ಗೌರವ ಆಂದೋಲನಕ್ಕೆ ಚಾಲನೆ ನೀಡಲಾಗಿದೆ. ಈ ಆಂದೋಲನದಲ್ಲಿ ಪ್ರತಿಯೊಬ್ಬರು ಕೈಜೋಡಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಪ್ರತಿಯೊಬ್ಬರು ತಮ್ಮ ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಸ್ಪಚ್ಛವಾಗಿಟ್ಟುಕೊಳ್ಳಬೇಕು, ನೈರ್ಮಲ್ಯ ಕಾಪಾಡುವುದರಿಂದ ನಮ್ಮ ಆರೋಗ್ಯ ವೃದ್ಧಿಸಿಕೊಳ್ಳಬಹುದು. ಹಾಗಾಗಿ ಪ್ರತಿಯೊಬ್ಬರೂ ಬಯಲು ಶೌಚ ಮಾಡುವುದನ್ನು ಬಿಟ್ಟು ಮನೆ ಶೌಚಾಲಯಗಳನ್ನು ಬಳಸುವ ಜತೆಗೆ ಸುತ್ತ ಮುತ್ತಲಿನ ಪ್ರತಿಯೊಬ್ಬ ಜನರು ಶೌಚಾಲಯ ಬಳಸುವಂತೆ ಪ್ರೇರಣೆ ತುಂಬಬೇಕು. ಪ್ರತಿಯೊಬ್ಬರೂ ಸಾರ್ವಜನಿಕ ಶೌಚಾಲಯಗಳನ್ನು ನಮ್ಮ ಮನೆ ಶೌಚಾಲಯಗಳಂತೆ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

ಜಾಗೃತಿ ಜಾಥಾ: ಈ ವೇಳೆ ಶೌಚಾಲಯ ಬಳಕೆ ಹಾಗೂ ಸ್ವಚ್ಛತೆಯ ಕುರಿತು ಗ್ರಾಮಸ್ಥರಿಗೆ ಅರಿವು ಮೂಡಿಸುವ ದೃಷ್ಟಿಯಿಂದ ಗ್ರಾಮದಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.ದೇವನಹಳ್ಳಿ ತಾಪಂ ಇಒ ಶ್ರೀನಾಥಗೌಡ ಶೌಚಾಲಯ ಬಳಕೆ ಹಾಗೂ ನೈರ್ಮಲ್ಯ ಕಾಪಾಡುವ ಕುರಿತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.