ಜಿಲ್ಲೆ

ಅನುದಾನ ಮರಳಿ ಹೋದರೆ ಅಧಿಕಾರಿಗಳ ವೇತನಕ್ಕೆ ಕತ್ತರಿ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಜಿಲ್ಲೆಯಲ್ಲಿ ನರೇಗಾ ಯೋಜನೆಯ ಅನುಷ್ಠಾನ, ಪ್ರಗತಿ ತೃಪ್ತಿಕರವಿಲ್ಲ. ಸಂಬ0ಧಪಟ್ಟ ಇಲಾಖೆಗಳು ನರೇಗಾ ಅಡಿ ಮಾನವ ದಿನ ಸೃಜನೆಯಲ್ಲಿ ಹಿಂದೆ ಬಿದ್ದಿರುವುದು ನಾಚಿಕೆಗೇಡಿತನದ ಸಂಗತಿ. ಯಾವುದೇ ಇಲಾಖೆ ಗುರಿ ಸಾಧನೆಯಲ್ಲಿ ಹಿಂದುಳಿಯಬಾರದು. ಅನುದಾನ ಮರಳಿ ಹೋದರೆ ಅಽಕಾರಿಗಳ ವೇತನದಲ್ಲಿ ಕಟಾವಣೆ ಮಾಡಲಾಗುವುದು ಎಂದು ಉಸ್ತುವಾರಿ ಸಚಿವ ಸಂತೋಷ ಲಾಡ್ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ 1ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

* ಉದ್ಯೋಗ ಕೊಡದಿದ್ದರೆ ಪಾಪ ಹತ್ತುತ್ತದೆ:

ನರೇಗಾ ಮಾನವ ದಿನ ಸೃಜನೆ ವಿಷಯವಾಗಿ ಜಿ.ಪಂ. ಉಪ ಕಾರ್ಯದರ್ಶಿ ಬಿ.ಎಸ್. ಮೂಗನೂರಮಠ ವಿರುದ್ಧವೂ ಸಚಿವ ಲಾಡ್ ಹರಿಹಾಯ್ದರು. ಪಿಡಿಒಗಳು ಕೆಲಸ ಮಾಡುವುದಿಲ್ಲ. ನೀವು ಹಳ್ಳಿಗಳಿಗೆ ಹೋವುದಿಲ್ಲ. ಹಿರಿತನ ಎಂದು ಹೇಳಿಕೊಂಡು ನೀವು ಪೋಸ್ ಕೊಡುತ್ತೀರಿ. ನರೇಗಾ ಜಾರಿಯಾದಾಗ ಮಾಡಿದ ಉದ್ಯೋಗ ಚೀಟಿಗಳು ಇಂದಿಗೂ ಇವೆ. ಅದರಲ್ಲಿ ಬಹುತೇಕ ಸಕ್ರಿಯ ಇಲ್ಲ. ನಿಷ್ಕಿçಯ ಏಕೆ ಆಗಿವೆ ಎಂಬುದನ್ನು ನೀವು ಪರಿಶೀಲಿಸುವುದಿಲ್ಲ. ಕೂಡಲೇ ಜಾಬ್ ಕಾರ್ಡ್ ಮೇಳ ಮಾಡಿ. ಅಗತ್ಯ ಇದ್ದವರಿಗೆ ಉದ್ಯೋಗ ಕೊಡದಿದ್ದರೆ ಪಾಪ ಹತ್ತುತ್ತದೆ ಎಂದರು.

ಉದ್ಯೋಗ ಕೇಳಿದವರಿಗೆ ನರೇಗಾ ಕೂಲಿ ಕೆಲಸ ಕೊಡಲು ನೂರು ಮಾರ್ಗ ಇವೆ. ಅದಕ್ಕೆ ಮನಸ್ಥಿತಿ ಬೇಕು. ನರೇಗಾ ಅನುಷ್ಠಾನದಲ್ಲಿ ಎದುರಾಗುವ ತಾಂತ್ರಿಕ ಸಮಸ್ಯೆಗಳ ಬಗ್ಗೆ ಆರ್‌ಡಿಪಿಆರ್ ಸಚಿವರೊಂದಿಗೆ ಚರ್ಚಿಸುತ್ತೇನೆ. ಅವಕಾಶವಿದ್ದರೆ ಅನುಷ್ಠಾನ ನಿಯಮಾವಳಿ ಸಡಿಲಿಸಲು ಚಿಂತಿಸಲಾಗುವುದು ಎಂದರು.

ಶಾಸಕ ಎನ್.ಎಚ್. ಕೋನರಡ್ಡಿ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ದಿವ್ಯ ಪ್ರಭು, ಭುವನೇಶ ಪಾಟೀಲ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ವಾಕರಸಾ ಸಂಸ್ಥೆ ಎಂಡಿ ಪ್ರಿಯಾಂಗಾ ಎಂ. ವೇದಿಕೆಯಲ್ಲಿದ್ದರು.