ಜಿಲ್ಲೆ

ಕಾಮಗಾರಿಗಳನ್ನು ಸೆಪ್ಟಂಬರ್‌ನೊಳಗೆ ಪೂರ್ಣಗೊಳಿಸಿ: ಜಿಪಂ ಸಿಇಒ ಕೆ.ಆರ್.ನಂದಿನಿ ಸೂಚನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಲೆಕ್ಕಶೀರ್ಷಿಕೆ 3054, ಗ್ರಾಮ ವಿಕಾಸ ಮತ್ತು ಮುಖ್ಯ ಮಂತ್ರಿ ಗ್ರಾಮ ವಿಕಾಸ ಯೋಜನೆಗಳು ಹಳೆಯ ಯೋಜನೆಗಳಾಗಿವೆ. ಇವುಗಳನ್ನು ಸೆಪ್ಟಂಬರ್‌ನೊಳಗೆ ಪೂರ್ಣಗೊಳಿಸಬೇಕೆಂದು ಕೆಆರ್‌ಐಡಿಎಲ್ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಸೂಚನೆ ನೀಡಿದರು.

ನಗರದ ಜಿಪಂ ಕಚೇರಿಯ ಮಿನಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಯೋಜನೆಗಳು ಅನುಮೋದನೆಗೊಂಡು ವರ್ಷಗಳೇ ಕಳೆದರೂ ಪೂರ್ಣಗೊಳಿಸಲಾಗಿಲ್ಲ. ಆದ್ದರಿಂದ, ಈ ಬಗ್ಗೆ ವಿಶೇಷ ಗಮನಹರಿಸಿ ಎಲ್ಲ ಕಾಮಗಾರಿಗಳನ್ನು ನಿಯಮಾನುಸಾರ ಪೂರ್ಣಗೊಳಿಸಿ ಹಸ್ತಾಂತರ ಮಾಡುವಂತೆ ಸೂಚಿಸಿದರು.

ಮುಖ್ಯಮಂತ್ರಿಗಳ ವಿಶೇಷ ಅನುದಾನ, ಮಳೆ, ಪ್ರವಾಹ ಹಾಗೂ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯ ಕಾಮಗಾರಿಗಳನ್ನು ಅವುಗಳ ಅನುದಾನ ಬಿಡುಗಡೆಯ ಆಧಾರದಲ್ಲಿ ತ್ವರಿತವಾಗಿ ಪೂರ್ಣಗೊಳಿಸಬೇಕು. ಕೆಆರ್‌ಐಡಿಎಲ್ ಸಂಸ್ಥೆಯಿಂದ ಅನುಷ್ಠಾನ ಮಾಡಲಾಗುತ್ತಿರುವ ಎಲ್ಲ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಈ ಮಾಹೆಯಲ್ಲಿ ಕಾಮಗಾರಿಗಳ ಗುಣಮಟ್ಟ ಪರೀಕ್ಷಿಸಲು ಅನಿರೀಕ್ಷಿತ ಭೇಟಿ ನೀಡಲಾಗುವುದು ಎಂದು ತಿಳಿಸಿದರು.

ಕೆಆರ್‌ಐಡಿಎಲ್ ಸಂಸ್ಥೆಗೆ ವಹಿಸಲಾಗುವ ಕಾಮಗಾರಿಗಳನ್ನು ಯಾವುದೇ ವಿಳಂಬಕ್ಕೆ ಆಸ್ಪದವಿಲ್ಲದಂತೆ ತ್ವರಿತವಾಗಿ ಪೂರ್ಣಗೊಳಿಸಲು ಕ್ರಮವಹಿಸಬೇಕು. ವಿಳಂಬಕ್ಕೆ ಕಾರಣರಾಗುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಂಡು ಕಾಮಗಾರಿಗಳನ್ನು ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ(ಅಭಿವೃದ್ಧಿ) ಪಿ.ಲಕ್ಷ್ಮೀ, ಸಹಾಯಕ ಕಾರ್ಯದರ್ಶಿ(ಅಭಿವೃದ್ಧಿ) ಚಂದ್ರು, ಕೆಆರ್‌ಐಡಿಎಲ್ ಕಾರ್ಯಪಾಲಕ ಇಂಜಿನಿಯರ್ ಸೋಮಶೇಖರ್ ಇತರರಿದ್ದರು.