ಮಂಡ್ಯ: ಜನನ ಮತ್ತು ಮರಣ ಘಟಿಸಿದ 30 ದಿನದೊಳಗೆ ನೋಂದಣಿ ಮಾಡಲು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳನ್ನು ಉಪನೋಂದಣಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ತಿಳಿಸಿದರು.
ನಗರದ ಜಿಪಂ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಗ್ರಾಪಂ ಕಾರ್ಯದರ್ಶಿಗೆ ಜನನ-ಮರಣ ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನನ- ಮರಣ ನೋಂದಣಿಯನ್ನು 1969ರಲ್ಲಿ ಜಾರಿಗೆ ತರಲಾಗಿದೆ. ಈ ಕೆಲಸವನ್ನು ಸರಳೀಕರಣ ಮಾಡಿ ಸಾರ್ವಜನಿಕರಿಗೆ ಸುಲಭವಾಗಿ ದೊರಕಿಸುವ ಉದ್ದೇಶದಿಂದ ಗ್ರಾಪಂ ಕಾರ್ಯದರ್ಶಿಗಳನ್ನು ಜನನ-ಮರಣ ಉಪನೋಂದಣಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ ಎಂದರು.
ಉಪನೋಂದಣಾಧಿಕಾರಿಗಳು ಜು.1ರಿಂದ ಕಾರ್ಯನಿರ್ವಹಿಸಲಿದ್ದು, ಕೆಲಸ ನಿರ್ವಹಿಸುವ ಬಗ್ಗೆ ತರಬೇತಿ ನೀಡಲಾಗಿದೆ. ಸಾರ್ವಜನಿಕರಿಗೆ ವಿಳಂಬವಾಗದ ರೀತಿಯಲ್ಲಿ ನಿಗದಿತ ಅವಧಿಯೊಳಗೆ ನೋಂದಣಿ ಮಾಡಿ ಒಂದು ಪ್ರತಿ ಪ್ರಮಾಣ ಪತ್ರವನ್ನು ಉಚಿತವಾಗಿ ನೀಡಿ. ಪ್ರಮಾಣ ಪತ್ರದ ಪ್ರಾಮುಖ್ಯತೆ, ಉಪಯೋಗಗಳು ಮತ್ತು ಉದ್ದೇಶಗಳನ್ನು ತಿಳಿಸುತ್ತಾ, ಸಾರ್ವಜನಿಕರು ಜನನ-ಮರಣ ಪ್ರಮಾಣ ಪತ್ರಗಳನ್ನು ಜನನ-ಮರಣ ಘಟಿಸಿದ 30 ದಿನದೊಳಗಾಗಿ ನೋಂದಣಿ ಮಾಡಿಸಿ ಪ್ರಮಾಣ ಪತ್ರವನ್ನು ತಮ್ಮ ವ್ಯಾಪ್ತಿಯಲ್ಲಿ ಪಡೆದುಕೊಳ್ಳಿ ಎಂದರು.
ಜಿಪಂ ಉಪಕಾರ್ಯದರ್ಶಿ ಆನಂದ್ ಕುಮಾರ್, ಮುಖ್ಯ ಯೋಜನಾಧಿಕಾರಿ ಎಸ್.ಧನುಷ್ ಇತರರಿದ್ದರು.