ಜಿಲ್ಲೆ

ವಿವಿಧ ಗ್ರಾಮಗಳ ಕಾಮಗಾರಿ ಪರಿಶೀಲಿಸಿ ಜಿಪಂ ಸಿಇಒ

Gadag - Desk - Tippanna Avadoot

ಲಕ್ಷ್ಮೇಶ್ವರ: ಜಿಲ್ಲಾ ಪಂಚಾಯತಿ ಸಿಇಒ ಭರತ್ ಎಸ್. ಗುರುವಾರ ವಿವಿಧ ಯೋಜನೆಗಳ ಅನುದಾನದಲ್ಲಿ ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದರು.

ಜಿಪಂ ಹಾಗೂ ತಾಪಂ ಅನಿರ್ಬಂಧಿತ ಅನುದಾನದಲ್ಲಿ ಲಕ್ಷ್ಮೇಶ್ವರ ಪಟ್ಟಣದ ದೇವರಾಜ ಅರಸು ವಸತಿ ನಿಲಯದಲ್ಲಿ ಗ್ರಂಥಾಲಯ ಕಟ್ಟಡ, ಒಡೆಯರ ಮಲ್ಲಾಪುರದ ಮುರಾರ್ಜಿ ವಸತಿ ಶಾಲೆಯಲ್ಲಿ ಶೌಚಗೃಹಗಳ ನವೀಕರಣ, ಆರ್​ಒ ಘಟಕ ವೀಕ್ಷಿಸಿದರು. ಶಿಗ್ಲಿ ಗ್ರಾಮದಲ್ಲಿಯ ಪದವಿ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಗಣಕಯಂತ್ರಗಳ ಪೂರೈಕೆ ಹಾಗೂ ಶೌಚಗೃಹ ನವೀಕರಣ ಕಾಮಗಾರಿ, ಶಿಗ್ಲಿ ಗ್ರಾಪಂ ಗ್ರಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿ ಪರಿಶೀಲಿಸಿದರು.

ಶಿಗ್ಲಿ ಗ್ರಾಮದಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ವಿುಸಲಾದ ಸಿ.ಸಿ. ರಸ್ತೆ ಕಾಮಗಾರಿಗಳ ಸ್ಥಳ ಮತ್ತು ಕಡತಗಳನ್ನು ಪರಿಶೀಲನೆ ಮಾಡಿದರು. ಎಫ್​ಟಿಒ ಸೃಜನೆ ಮಾಡುವಾಗ ಎಂಬಿ ಪುಸ್ತಕದಲ್ಲಿ ದಾಖಲಿಸಿರುವ ಮೊತ್ತವನ್ನೇ ದಾಖಲಿಸಿ ಎಂಐಎಸ್ ಮಾಡುವಂತೆ ಸೂಚಿಸಿದರು. ಕಾಮಗಾರಿ ಕಡತದಲ್ಲಿ ದರಪಟ್ಟಿ ಆಹ್ವಾನ ಮತ್ತು ಪತ್ರಿಕಾ ಪ್ರಕಟಣೆಯ ದಾಖಲೆ ಇರುವಂತೆ ನೋಡಿಕೊಳ್ಳಲು ಸೂಚಿಸಿದರು. ದೊಡ್ಡೂರ ಗ್ರಾಮ ಪಂಚಾಯತಿಯಲ್ಲಿ ಪ್ರಗತಿಯಲ್ಲಿರುವ ಗ್ರಾಪಂ ಕಟ್ಟಡ, ಶಾಲಾ ಶೌಚಗೃಹ, ಸಿ.ಸಿ. ಗಟಾರ, ಸಿ.ಸಿ. ರಸ್ತೆ ಮತ್ತು ಸೂರಣಗಿ ಪಂಚಾಯಿತಿ ವ್ಯಾಪ್ತಿಯ ಸುರ್ವಣಗಿರಿ ತಾಂಡಾದಲ್ಲಿ ಅಂಗನವಾಡಿಗೆ ಶೌಚಗೃಹ ಮತ್ತು ಸುಣ್ಣ- ಬಣ್ಣ ಹಚ್ಚಿದ ಕಾಮಗಾರಿ, ನರೇಗಾ ಯೋಜನೆಯ ಸಿ.ಡಿ. ನಿರ್ಮಾಣ ಕಾಮಗಾರಿ ಮತ್ತು ಎನ್​ಆರ್​ಎಲ್​ಎಂ ಕಟ್ಟಡ ಕಾಮಗಾರಿ ಪರಿವೀಕ್ಷಣೆ ಮಾಡಿದರು.

ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಲಭ್ಯವಾಗುವ ಸೌಲಭ್ಯಗಳನ್ನು ನಿಯಮಾನುಸಾರ ವಿತರಣೆ ಮಾಡಬೇಕು ಎಂದು ಹಾಸ್ಟೆಲ್ ಸಿಬ್ಬಂದಿಗೆ ಸೂಚನೆ ನೀಡಿದರು. ವಿದ್ಯಾರ್ಥಿ ನಿಲಯ ಆವರಣದಲ್ಲಿ ಸ್ವಚ್ಛತೆ ಕಾಪಾಡಬೇಕು. ಅಡುಗೆ ಕೋಣೆಯನ್ನು ಸದಾ ಸ್ವಚ್ಛವಾಗಿರಿಸಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆಯಾಗುತ್ತಿದ್ದು, ಶುಚಿ, ರುಚಿ ಆಹಾರ ಒದಗಿಸಬೇಕು ಎಂದು ಹಾಸ್ಟೆಲ್ ವಾರ್ಡ್​ನ್ಗಳಿಗೆ ತಿಳಿಸಿದರು.

ಲಕ್ಷ್ಮೇಶ್ವರ ತಾಪಂ ಇಒ ಕೃಷ್ಣಪ್ಪ ಧರ್ಮರ, ಪಿಡಿಒ ಶಿವಕುಮಾರ ವಾಲಿ, ರವಿ ಕೊರಕನವರ, ಜಿಎಂ. ರೋಣದ, ತಾಲೂಕು ಮಟ್ಟದ ಅಧಿಕಾರಿಗಳು ಇತರರಿದ್ದರು.