ಚಿತ್ರದುರ್ಗ: ಸರ್ಕಾರಿ ಶಾಲೆಗಳು ಯಾವುದಕ್ಕೂ ಕಡಿಮೆ ಇಲ್ಲ. ಎಸ್ಸೆಸ್ಸೆಲ್ಸಿಯಲ್ಲಿ ಮೇಲುಗೈ ಸಾಧಿಸಿರುವ ನಿದರ್ಶನ ಕಣ್ಣ ಮುಂದಿದೆ. ಪಾಲಕರು ನಂಬಿಕೆ ಇಟ್ಟು ದಾಖಲಿಸಿ ಎಂದು ಜಿಪಂ ಸಿಇಒ ಎಂ.ಎಸ್.ದಿವಾಕರ್ ಸಲಹೆ ನೀಡಿದರು.
ಮೆದೇಹಳ್ಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಈ ಜಿಲ್ಲೆಯ ಸರ್ಕಾರಿ ಶಾಲೆಗಳ ಸಾಧನೆ ಖಾಸಗಿ ಶಾಲೆಗಳಿಗಿಂತಲೂ ಉತ್ತಮವಾಗಿದ್ದು, ಅವಿಸ್ಮರಣೀಯ ಎಂದರು.
ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾನ್ವಿತ ಶಿಕ್ಷಕರಿದ್ದಾರೆ. ಸರ್ಕಾರದಿಂದ ಉಚಿತ ಸಮವಸ್ತ್ರ, ಶೂ, ಸಾಕ್ಸ್, ಪಠ್ಯಪುಸ್ತಕದ ಜತೆಗೆ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಸೋರುತ್ತಿರುವ ಅನೇಕ ಶಾಲಾ ಕೊಠಡಿಗಳ ದುರಸ್ತಿಗೆ ಮೊದಲ ಆದ್ಯತೆ ನೀಡಲಾಗಿದ್ದು, ಇದಕ್ಕಾಗಿ ಕೆಎಂಇಆರ್‌ಸಿ ಅನುದಾನ ಬಳಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಬಿಇಒ ಎಚ್.ಗಿರಿಜಾ ಮಾತನಾಡಿ, ಮಕ್ಕಳನ್ನು ಪ್ರೀತಿ ಹಾಗೂ ನಗು ಮೊಗದಿಂದ ಶಾಲೆಗೆ ಆಹ್ವಾನಿಸಿ, ವರ್ಷವಿಡೀ ಸಂತಸದಿಂದ ಕಲಿಕೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಶಾಲಾ ಪ್ರಾರಂಭೋತ್ಸವದ ಉದ್ದೇಶ ಎಂದರು.
ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ದುಗ್ಗಪ್ಪ, ಸುಶೀಲಮ್ಮ, ಎಂ.ಜಿ.ಜಯರಾಮರೆಡ್ಡಿ, ಲಕ್ಷ್ಮೀದೇವಿ ಶ್ರೀನಿವಾಸ, ಕಮಲಮ್ಮ, ನಿಂಗಪ್ಪ, ಶಾಲಾ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಂಜಣ್ಣ, ಉಪಾಧ್ಯಕ್ಷೆ ಆಶಾ, ಸದಸ್ಯರಾದ ಪ್ರಕಾಶ್, ಮಂಜುನಾಥ, ದುರ್ಗಪ್ಪ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ತಿಮ್ಮಾರೆಡ್ಡಿ, ಮುಖಂಡರಾದ ಶಂಕರ, ವಿಜಯಕುಮಾರ್, ಪಿಡಿಒ ಪಾತಣ್ಣ, ಕ್ಷೇತ್ರ ಸಮನ್ವಯಾಧಿಕಾರಿ ಸಂಪತ್ ಇತರರಿದ್ದರು.
ಅನಗತ್ಯ ಆರ್ಥಿಕ ಹೊರೆ ಬೇಡ
ಖಾಸಗಿ ಶಾಲೆಗಳಲ್ಲಿ ಶುಲ್ಕಗಳು ಹೆಚ್ಚಿವೆ. ಆದ್ದರಿಂದ ಪಾಲಕರು ಅನಗತ್ಯ ಆರ್ಥಿಕ ಹೊರೆ ಮಾಡಿಕೊಂಡು ಮಕ್ಕಳನ್ನು ಸೇರಿಸುವುದರಲ್ಲಿ ಅರ್ಥವಿಲ್ಲ. ಮೊದಲು ಕೀಳರಿಮೆ ಬಿಡಿ. ಸರ್ಕಾರಿ ಶಾಲಾ ಶಿಕ್ಷಕರ ಮಗನಾಗಿ, ಸರ್ಕಾರಿ ಶಾಲೆಯಲ್ಲೇ ಓದಿ, ಪ್ರಸ್ತುತ ಭಾರತೀಯ ಆಡಳಿತ ಸೇವೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಸಾಕಷ್ಟು ಮಂದಿ ಉನ್ನತ ಸ್ಥಾನಕ್ಕೇರಿರುವುದೇ ಸಾಕ್ಷಿ. ಶಿಕ್ಷಕರು ಚಟುವಟಿಕೆ ಆಧಾರದಲ್ಲಿ ಬೋಧಿಸಿ. ಜತೆಗೆ ಸಂಸ್ಕಾರ ಕಲಿಸಿ, ಗುಣಮಟ್ಟದ ಶಿಕ್ಷಣ ನೀಡಿ ಎಂದು ದಿವಾಕರ್ ಸಲಹೆ ನೀಡಿದರು.