ಜಿಲ್ಲೆ

ರೈತರ ಖಾತೆ ಹೋಲ್ಡ್ ಮಾಡಬಾರದು

ರಮೇಶ ಮೇಳಕುಂದಾ

ಕಲಬುರಗಿ: ಜಿಲ್ಲೆಯ 11 ತಾಲೂಕು ಬರ ಘೋಷಣೆ ಮಾಡಲಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ರೈತರ ಖಾತೆಗೆ ಬರುವ ಸರ್ಕಾರದ ಯಾವುದೇ ಯೋಜನೆಯ ಸಹಾಯಧನ, ಪ್ರೋತ್ಸಾಹಧನ ಸೇರಿ ಹಣವನ್ನು ಸಾಲಕ್ಕೆ ಕಡಿತಮಾಡಿಕೊಳ್ಳಬಾರದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಭನ್ವರ್‌ಸಿಂಗ್ ಮೀನಾ ಖಡಕ್ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ಸಂಜೆ ಜಿಲ್ಲೆಯ ಎಲ್ಲ ಬ್ಯಾಂಕ್‌ನ ಪ್ರಮುಖ ಅಧಿಕಾರಿಗಳ ತುರ್ತು ಸಭೆ ನಡೆಸಿ ಮಾತನಾಡಿದ ಅವರು, ಗೃಹ ಲಕ್ಷ್ಮೀ, ಸರ್ಕಾರದ ಬರ ಪರಿಹಾರ, ಪಿಂಚಣಿ ಹಣ ಸೇರಿ ಸರ್ಕಾರದ ಯಾವುದೇ ಯೋಜನೆಯಿಂದ ಬಂದ ಪರಿಹಾರ, ನೆರವಿನ ಹಣವನ್ನು ಸಾಲಕ್ಕೆ ಪರಿವರ್ತಿಸಬಾರದು ಎಂದು ಸೂಚಿಸಿದರು.

ಯಾವುದೇ ಕಾರಣಕ್ಕೂ ರೈತರ ಖಾತೆಗಳನ್ನು ಹೋಲ್ಡ್ ಮಾಡಬಾರದು. ಸರ್ಕಾರದ ಆದೇಶದಂತೆ ರೈತರ ಸಾಲದ ಖಾತೆಗಳನ್ನು ಪುನರ್ ರಚಿಸಬೇಕು. ಎಲ್ಲ ಬ್ಯಾಂಕ್‌ನವರು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ತಿಳಿಸಿದರು.

ಮಾರ್ಗದರ್ಶಿ ಬ್ಯಾಂಕ್ ಪ್ರಮುಖ ಜಿಲ್ಲಾ ವ್ಯವಸ್ಥಾಪಕ ಎಲ್‌ಡಿಎಂ) ಸದಾಶಿವ ವಿ.ರಾತ್ರೇಕರ್, ರೀಸನಲ್ ಮ್ಯಾನೇಜರ್ ಕೆಜಿಬಿ ಎಸ್.ಬಿ.ಹುಲಿಮನಿ ಸೇರಿ ಜಿಲ್ಲೆಯ ಎಲ್ಲ ಬ್ಯಾಂಕ್‌ಗಳ ಪ್ರಮುಖ ಅಧಿಕಾರಿಗಳಿದ್ದರು.