ಜಿಲ್ಲೆ

ಬಕೆಟ್ ಹಗರಣದ ಆರೋಪಿಗೆ ಗೇಟ್‌ಪಾಸ್ ; ರುಕ್ಕೇಶ್ ದೊಡ್ಡಮನಿಗೆ ಕೊಕ್ ; ಹಿರಿಯ ಅಧಿಕಾರಿಗಳ ರಕ್ಷಣೆ?

ತುಮಕೂರು : ಜಿಲ್ಲೆಯ 76 ಗ್ರಾಪಂಗಳಲ್ಲಿ ಸ್ವಚ್ಛ ಭಾರತ್ ಮಿಷನ್ ವತಿಯಿಂದ ಆರಂಭಿಸಲಾಗಿರುವ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಡೆದಿರುವ ಅಕ್ರಮಕ್ಕೆ ಮೊದಲ ತಲೆತಂಡವಾಗಿದೆ.

ಯೋಜನೆಯ ಸಮಾಲೋಚಕ ರುಕ್ಕೇಶ್ ದೊಡ್ಡಮನಿಯನ್ನು ಹುದ್ದೆಯಿಂದ ತೆರವುಗೊಳಿಸಲಾಗಿದ್ದು ಉನ್ನತ ಮಟ್ಟದ ಅಧಿಕಾರಿಗಳಲ್ಲಿ ನಡುಕ ಆರಂಭವಾಗಿದೆ. ಘನತ್ಯಾಜ್ಯ ವಿಲೇವಾರಿ ಘಟಕದ ವಾಹನ ಖರೀದಿಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ‘ವಾಹನ ಖರೀದಿಯಲ್ಲಿ ಕಿಕ್‌ಬ್ಯಾಕ್’ ಶೀರ್ಷಿಕೆಯಲ್ಲಿ ಏ.21ರಂದು ಹಾಗೂ ಜಿಪಂನಲ್ಲಿ ‘ಕಸದ ಬಕೆಟ್’ ಶೀರ್ಷಿಕೆಯಲ್ಲಿ ಜೂ.20ರಂದು ವಿಜಯವಾಣಿ ವರದಿ ಪ್ರಕಟಿಸಿತ್ತು. ಅಲ್ಲದೆ ಗ್ರಾಪಂ ಪರಮಾಧಿಕಾರ ಮೊಟಕುಗೊಳಿಸಿ ಜಿಪಂ ಅಧಿಕಾರಿಗಳೇ ಯೋಜನೆ ಸಂಯೋಜಕರ ಮೂಲಕ ಒತ್ತಡ ತಂದು ಒಂದೇ ಸಂಸ್ಥೆಯ ವಾಹನ ಖರೀದಿಸಿರುವ ಬಗ್ಗೆ ಗಮನ ಸೆಳೆಯಲಾಗಿತ್ತು.

ಪತ್ರಿಕೆಯಲ್ಲಿ ಅಕ್ರಮದ ವರದಿ ಗಮನಿಸಿದ್ದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತರು ಜೂ.29ರಂದು ನಡೆದಿದ್ದ ವಿಡಿಯೋ ಸಂವಾದದಲ್ಲಿ ರುಕ್ಕೇಶ್ ದೊಡ್ಡಮನಿಯನ್ನು ತೆರವುಗೊಳಿಸಿದ್ದರು. ಆದರೆ, ಪ್ರಭಾವ ಬಳಸಿ ಹುದ್ದೆಯಲ್ಲಿ ಮುಂದುವರಿಯಲು ರುಕ್ಕೇಶ್ ನಡೆಸಿದ್ದ ಕಸರತ್ತು ವಿಲವಾಗಿದ್ದು ಜು.26ರಂದು ಹುದ್ದೆಯಿಂದ ಬಿಡುಗಡೆಗೊಳಿಸಿ ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಆದೇಶಿಸಿದ್ದಾರೆ.

ಜಿಲ್ಲೆಯ 330 ಗ್ರಾಪಂಗಳ ಪೈಕಿ 76 ಗ್ರಾಪಂಗಳಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ವಾಹನ ಹಾಗೂ ಮನೆಮನೆಗೆ ಬಕೆಟ್ ಖರೀದಿ ನಡೆದಿದ್ದು, ಅದರಲ್ಲಿ ಅಕ್ರಮ ನಡೆದಿರುವುದನ್ನು ವಿಜಯವಾಣಿ ಬಯಲುಗೊಳಿಸಿದ್ದ ಹಿನ್ನೆಲೆಯಲ್ಲಿ ಟೆಂಡರ್ ಕರೆದಿರುವ ಹಾಗೂ ನೀಡಿರುವ ಕಾರ್ಯಾದೇಶ ರದ್ದುಪಡಿಸಲು ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಜೂ.14ರಂದು ಅಧಿಕೃತ ಸೂಚನೆ ನೀಡಿದ್ದರು.

ಆಟೋ ಖರೀದಿಗೆ ಸರ್ಕಾರದಿಂದ ಯಾವುದೇ ಮಾರ್ಗಸೂಚಿ ಇಲ್ಲದಿದ್ದರೂ ಟೆಂಡರ್ ಪ್ರಕಟಣೆ ಸಂದರ್ಭದಲ್ಲಿ ನಮ್ಮ ನೆಚ್ಚಿನ ಸಂಸ್ಥೆಗೆ ಅನುಕೂಲವಾಗುವಂತೆ ಷರತ್ತು ನೀಡಿ ಒಂದೇ ಸಂಸ್ಥೆಗೆ ಅನುಕೂಲ ಮಾಡಿಕೊಟ್ಟಿರುವ ಸ್ವಹಿತಾಸಕ್ತಿ ಜಿಲ್ಲೆಯಲ್ಲಿರುವ ಎಲ್ಲ ಗ್ರಾಪಂಗಳಿಗೆ ನಷ್ಟ ಉಂಟು ಮಾಡಿದ್ದು ಅವ್ಯವಹಾರದ ಉನ್ನತ ಮಟ್ಟದ ತನಿಖೆಯ ಅಗತ್ಯವಿದೆ.

15ನೇ ಹಣಕಾಸು ಯೋಜನೆ ಅನುದಾನದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳ ನಿರ್ವಹಣೆಗೆ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಜನವಸತಿಗಳಲ್ಲಿ ಒಂದು ಕುಟುಂಬಕ್ಕೆ ಎರಡು ಕಸದಬುಟ್ಟಿಗಳಂತೆ ಖರೀದಿ ಮಾಡಲಾಗಿದ್ದು ಪ್ರಸ್ತುತ 76 ಗ್ರಾಪಂಗಳು ಕರ್ನಾಟಕ ಪಾರದರ್ಶಕ ಅಧಿನಿಯಮ -2000 (ಕೆಟಿಪಿಪಿ) ಉಲ್ಲಂಸಿರುವುದು ದೊಡ್ಡ ಭ್ರಷ್ಟಾಚಾರಕ್ಕೆ ಕಾರಣವಾಗಿದೆ.

ಹರಕೆ ಕುರಿಯಾದ ರುಕ್ಕೇಶ್ ದೊಡ್ಡಮನಿ ? : ಲಕ್ಷಾಂತರ ರೂ. ಅವ್ಯವಹಾರ ಬಯಲಾಗಿದ್ದರೂ ಸ್ವಚ್ಛ ಭಾರತ್ ಅಭಿಯಾನ ಯೋಜನೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್‌ಎಲ್‌ಡಬ್ಲೂೃಎಂ ಸಮಾಲೋಚಕ ರುಕ್ಕೇಶ್ ದೊಡ್ಡಮನಿಗೆ ಮಾತ್ರ ಶಿಕ್ಷೆ ನೀಡಲಾಗಿದ್ದು ಇದಕ್ಕೆ ನೇರ ಕಾರಣರಾದ ಅಧಿಕಾರಿಗಳ ರಕ್ಷಣೆಗೆ ಜಿಪಂ ನಿಂತಿದೆ ಎಂಬ ದೂರು ಕೇಳಿಬಂದಿದೆ. ರುಕ್ಕೇಶ್‌ಗೆ ಜು.1ರಂದು ನೋಟಿಸ್ ನೀಡಲಾಗಿದ್ದು ನೀಡಿದ ಉತ್ತರ ತೃಪ್ತಿಯಾಗಿಲ್ಲ ಎಂದು ಸೇವೆಯಿಂದ ಬಿಡುಗಡೆಯಷ್ಟೇ ಮಾಡಲಾಗಿದೆ. ಆದರೆ, ವಾಸ್ತವದಲ್ಲಿ ಈ ಅಕ್ರಮದ ಹಿಂದೆ ಜಿಪಂ ಹಿರಿಯ ಅಧಿಕಾರಿಗಳೇ ಭಾಗಿಯಾಗಿದ್ದು ಅವರ ಬಗ್ಗೆ ಮೌನತಾಳಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಪ್ರಕರಣ ಮುಚ್ಚಿಡುವ ಯತ್ನಕ್ಕೆ ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಅವಕಾಶ ನೀಡಲಾರರು ಎಂಬ ನಂಬಿಕೆ ಜಿಲ್ಲೆಯ ಜನರಲ್ಲಿದೆ.

ಅವ್ಯವಹಾರ ನಡೆಸುವ ಸಲುವಾಗಿಯೇ ಗ್ರಾಪಂ ಆಡಳಿತದಲ್ಲಿ ಜಿಪಂ ಅಧಿಕಾರಿಗಳು ಹಸ್ತಕ್ಷೇಪ ಮಾಡಿದ್ದರು, ಸದಸ್ಯರ ವಿರೋಧವನ್ನೂ ಲೆಕ್ಕಿಸದೆ ಜಿಪಂ ಅಧಿಕಾರಿಗಳೇ ಹಠಮಾಡಿ ಸಾರ್ವಜನಿಕರ ಹಣ ದುರುಪಯೋಗ ಮಾಡಿದ್ದಾರೆ. ಸಣ್ಣ-ಪುಟ್ಟವರು, ಕೆಳಹಂತದ ಅಧಿಕಾರಿಗಳನ್ನಷ್ಟೇ ಗುರಿಯಾಗಿಸದೆ ತಪ್ಪಿತಸ್ಥರಿಗೆಲ್ಲ ಶಿಕ್ಷೆಯಾಗಬೇಕು. ಕಾಡಶೆಟ್ಟಿಹಳ್ಳಿ ಸತೀಶ್, ರಾಜ್ಯ ಸಂಚಾಲಕ, ರಾಜ್ಯ ಗ್ರಾಪಂ ಸದಸ್ಯರ ಮಹಾಒಕ್ಕೂಟ ಗ್ರಾಪಂಗಳಿಂದ ಖರೀದಿಸಲಾಗುತ್ತಿರುವ ಸಾಧನ ಸಾಮಗ್ರಿ ಖರೀದಿಯಲ್ಲಿ ಸಮಾಲೋಚಕ ಅನಗತ್ಯವಾಗಿ ಪಾಲ್ಗೊಳ್ಳುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ನೀಡಲಾಗಿದ್ದ ನೋಟಿಸ್‌ಗೆ ನೀಡಿರುವ ಉತ್ತರ ತೃಪ್ತಿಕರವಾಗಿಲ್ಲದ ಕಾರಣಕ್ಕೆ ರುಕ್ಕೇಶ್ ದೊಡ್ಡಮನಿಯನ್ನು ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ. ಡಾ.ಕೆ.ವಿದ್ಯಾಕುಮಾರಿ ಸಿಇಒ, ತುಮಕೂರು ಜಿಪಂ