ಜಿಲ್ಲೆ

ವಲಯ ಅರಣ್ಯಾಧಿಕಾರಿ ಲೋಕಾಯುಕ್ತ ಬಲೆಗೆ

ಪ್ರಸಿನ್ ಕೆ.ಆರ್

ಹನೂರು: ತಾಲೂಕಿನ ಕೌದಳ್ಳಿ ಗ್ರಾಮದ ಅರಣ್ಯ ಇಲಾಖೆಯ ವಸತಿ ಗೃಹದಲ್ಲಿ ಗುರುವಾರ ಲಂಚ ಪಡೆಯುತ್ತಿರುವಾಗಲೇ ವಲಯ ಅರಣ್ಯಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಕೌದಳ್ಳಿ ಅರಣ್ಯ ವಲಯದ ಕಾಂತರಾಜ್ ಚೌಹಾಣ್ ಲೋಕಾಯುಕ್ತ ಬಲೆಗೆ ಬಿದ್ದ ವಲಯ ಅರಣ್ಯಾಧಿಕಾರಿ.

ಘಟನೆ ವಿವರ: ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಜೋಸೆಫ್ ಅನ್ಬಗಾಳಗಂ ಎಂಬುವರು ನಾಲ್‌ರೋಡ್ ಅರಣ್ಯ ಪ್ರದೇಶದ ಹುಣಸೆಮರದ ಬಾವಿ ಸಮೀಪದಲ್ಲಿ ನರೇಗಾ ಯೋಜನೆಯಡಿ 10 ಲಕ್ಷ ರೂ ವೆಚ್ಚದಲ್ಲಿ ಚೆಕ್‌ಡ್ಯಾಂ ನಿರ್ಮಿಸುವ ಜವಬ್ದಾರಿ ಹೊತ್ತಿದ್ದರು. ಆದರೆ, ಕಾಮಗಾರಿಯನ್ನು ಆರಂಭಿಸುವ ಸಂಬಂಧ ಆರ್‌ಎಫ್‌ಒ ಕಾಂತರಾಜ್ ಚೌಹಾಣ್ 80 ಸಾವಿರ ರೂ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಆದರೆ, ಲಂಚ ನೀಡದ ಕಾರಣ ಆರ್‌ಎಫ್‌ಒ ಕಳೆದ ಒಂದು ವರ್ಷದಿಂದಲೂ ಅನುಮತಿ ನೀಡದೇ ಸತಾಯಿಸುತ್ತಿದ್ದರು. ಈ ಹಿನ್ನೆಲೆ ಜೋಸೆಫ್ ಇತ್ತೀಚೆಗೆ ಆರ್‌ಎಫ್‌ಒಗೆ 20 ಸಾವಿರ ರೂ ನೀಡಿದ್ದು, ಉಳಿಕೆ 60 ಸಾವಿರ ರೂ ಅನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ತಿಳಿಸಿದ್ದರು. ಈ ಸಂಬಂಧ ಜೋಸೆಫ್ ಲೋಕಾಯುಕ್ತರಿಗೆ ದೂರು ನೀಡಿದ್ದರು. ಗುರುವಾರ ಬೆಳಗ್ಗೆ 8.30ರ ವೇಳೆಯಲ್ಲಿ ಕೌದಳ್ಳಿ ವಸತಿ ಗೃಹದಲ್ಲಿ 60 ಸಾವಿರ ರೂ ಲಂಚ ಪಡೆಯುತ್ತಿರುವಾಗಲೇ ಲೋಕಾಯುಕ್ತಾ ಡಿವೈಎಸ್ಪಿ ಮ್ಯಾಥುವ್ ಥಾಮಸ್ ಹಾಗೂ ಸಿಬ್ಬಂದಿ ದಾಳಿ ನಡೆಸಿದಾಗ ಆರ್‌ಎಫ್‌ಒ ಬಲೆಗೆ ಬಿದ್ದಿದ್ದಾರೆ.

7 ತಿಂಗಳಲ್ಲೇ ಮೂವರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ: ಕಳೆದ ಮಾರ್ಚ್ 13 ರಂದು 139 ದಿನದ ಗಳಿಕೆ ರಜೆಯ ಹಣ ಮಂಜೂರು ಮಾಡುವ ಸಂಬಂಧ ನಿವೃತ್ತ ಶಿಕ್ಷಕರೊಬ್ಬರಿಂದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಶಿವರಾಜು ಅವರು 15 ಸಾವಿರ ರೂ ಲಂಚ ಪಡೆಯುತ್ತಿರುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಸೆ.18ರಂದು ತಾಲೂಕಿನ ಪಾಲಾರ್‌ನಲ್ಲಿ ಗಿರಿಜನರಿಗೆ ಸರ್ಕಾರದಿಂದ ಮಂಜೂರಾಗಿರುವ ಮನೆ ನಿರ್ಮಾಣ ಸಂಬಂಧ ಡಿಆರ್‌ಎಫ್‌ಒ ಆಗಿದ್ದ ಭೋಜಪ್ಪ ಎಂಬುವರು 18 ಸಾವಿರ ರೂ ಲಂಚ ಪಡೆಯುತ್ತಿರುವಾಗಲೇ ಸಿಕ್ಕಿ ಬಿದ್ದಿದ್ದರು. ಇದೀಗ ಆರ್‌ಎಫ್‌ಒ ಕಾಂತರಾಜ್ ಚೌಹಾಣ್ 60 ಸಾವಿರ ರೂ ಲಂಚ ಪಡೆಯುತ್ತಿರುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಹಾಗಾಗಿ ಕಳೆದ 7 ತಿಂಗಳ ಅವಧಿಯಲ್ಲೇ ಮೂವರು ಸರ್ಕಾರಿ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಂತಾಗಿದ್ದು, ಇದರಲ್ಲಿ ಇಬ್ಬರು ಅರಣ್ಯ ಇಲಾಖೆಯ ಅಧಿಕಾರಿಗಳಾಗಿದ್ದಾರೆ.