ಮಂಡ್ಯ: ಪ್ರಸಕ್ತ ಶೈಕ್ಷಣಿಕ ಸಾಲಿನ ಶಾಲಾ ತರಗತಿ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳಡಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿ ನಿಲಯಗಳ ಪುನರಾರಂಭವನ್ನು ಸಂಭ್ರಮದಿಂದ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಿ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಸೂಚಿಸಿದರು.
ನಗರದ ಜಿಪಂ ಕಚೇರಿಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು, ಸಹಾಯಕ ನಿರ್ದೇಶಕರು, ನಿಲಯ ಮೇಲ್ವಿಚಾರಕರುಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 109, ಸಮಾಜ ಕಲ್ಯಾಣ ಇಲಾಖೆಯ 46 ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ 2 ಮತ್ತು ಮೆಟ್ರಿಕ್ ನಂತರದ ಐದು ವಿದ್ಯಾರ್ಥಿನಿಲಯಗಳಿವೆ. ಬೇಸಿಗೆ ರಜೆಯ ನಂತರ ಪುನರಾರಂಭಗೊಳ್ಳುತ್ತಿರುವುದರಿಂದ ಹಾಸ್ಟೆಲ್‌ಗಳಿಗೆ ತಳಿರು ತೋರಣಗಳಿಂದ ಅಲಂಕರಿಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಬೇಕು. ಅಂತೆಯೇ ವಿದ್ಯಾರ್ಥಿ/ವಿದ್ಯಾರ್ಥಿನಿಯರ ಶಯನ ಕೊಠಡಿ, ಊಟದ ಕೊಠಡಿ, ವಿದ್ಯಾರ್ಥಿನಿಲಯಗಳ ಒಳ ಮತ್ತು ಹೊರ ಆವರಣ, ನಿಲಯದ ನೀರಿನ ಟ್ಯಾಂಕ್ ಮತ್ತು ಸಂಪುಗಳ ಸ್ವಚ್ಛತೆಯ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು. ನಿಲಯದ ಆವರಣದಲ್ಲಿ ನೀರು ನಿಲ್ಲದಂತೆ ಕ್ರಮವಹಿಸಬೇಕು ಎಂದರು.
ಶೌಚಗೃಹ ಹಾಗೂ ಸ್ನಾನದ ಗೃಹಗಳ ಕಿಟಕಿ, ಬಾಗಿಲು ಹಾಳಾಗಿದ್ದಲ್ಲಿ ಹಾಗೂ ಸೋಲಾರ್‌ವಾಟರ್ ಹೀಟರ್ ಸುಸ್ಥಿತಿಯಲ್ಲಿ ಇಲ್ಲದಿದ್ದರೆ ದುರಸ್ಥಿಪಡಿಸಲು ನಿಯಮಾನುಸಾರ ಕ್ರಮ ವಹಿಸಬೇಕು. ಅಡುಗೆ ತಯಾರಕರು ಅಡುಗೆ ಕೋಣೆಯನ್ನು ಆಗಿಂದಾಗ್ಗೆ ಶುಚಿಗೊಳಿಸುವಂತೆ ಹಾಗೂ ಅಡುಗೆ ತಯಾರಿಕೆಗೆ ಶುದ್ಧ ಕುಡಿಯುವ ನೀರನ್ನು ಬಳಸುವಂತೆ ಮತ್ತು ಪಾತ್ರೆಗಳನ್ನು ಸಮರ್ಪಕವಾಗಿ ಶುಚಿಗೊಳಿಸಬೇಕು. ಕುಡಿಯುವ ನೀರಿನ ಸಂಪರ್ಕ ಇಲ್ಲದಿದ್ದಲ್ಲಿ ಸಂಬಂಧಪಟ್ಟ ನಗರಸಭೆ/ ಪುರಸಭೆ/ ಪಂಚಾಯಿತಿ ಅಧಿಕಾರಿಗಳನ್ನು ಸಂಪರ್ಕಿಸಿ ಪಡೆದುಕೊಳ್ಳಬೇಕು. ಯಾವುದೇ ಅವಘಡಗಳು ಸಂಭವಿಸದಂತೆ ತಡೆಯಲು ಕೊಠಡಿಗಳಲ್ಲಿ ವಿದ್ಯುತ್ ಸಂಪರ್ಕ ವೈಯರ್‌ಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳ ಚಲನ ವಲನಗಳ ಬಗ್ಗೆ ಹಾಗೂ ಇತರರೊಂದಿಗೆ ಹೆಚ್ಚಾಗಿ ಬೆರೆಯದವರ ಕಡೆ ಗಮನಹರಿಸಿ. ಅಂತಹ ವಿದ್ಯಾರ್ಥಿಗಳಿಗೆ ಕೌನ್ಸಲಿಂಗ್ ಮಾಡಿಸಿ ಸಮಸ್ಯೆ ಪರಿಹರಿಸಬೇಕು. ದಾಖಲಾತಿ ಕೊರತೆಯಿರುವುದಕ್ಕೆ ಸಂಬಂಧಿಸಿದಂತೆ ಸಮೀಪದಲ್ಲಿರುವ ಶಾಲಾ/ಕಾಲೇಜುಗಳಿಗೆ ಭೇಟಿ ನೀಡಿ ಪ್ರವೇಶ ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ನಿರ್ದೇಶನ ನೀಡುವಂತೆ ಹಾಗೂ ಸಂಬಂಧಪಟ್ಟ ನಿಲಯ ಮೇಲ್ವಿಚಾರಕರು ಪ್ರವೇಶಾತಿಗೆ ಸಂಬಂಧಿಸಿದಂತೆ ಮಾಹಿತಿ ನೀಡುವ ಮೂಲಕ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಉತ್ತೇಜಿಸಬೇಕು ಎಂದರು.
ನೀರಿನ ಶುಚಿತ್ವಕ್ಕೆ ಹೆಚ್ಚಿನ ಗಮನಹರಿಸಿ. ಸ್ಯಾಂಪಲ್‌ಗಳ ಪರೀಕ್ಷೆ ನಡೆಸಿ ಶುದ್ಧ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು. ಉತ್ತಮ ಆಹಾರ ಸಾಮಗ್ರಿಗಳು, ತಾಜಾ ತರಕಾರಿಗಳನ್ನು ಬಳಸುವುದು, ಮೆನುಚಾರ್ಟ್ ಪ್ರಕಾರ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ನೀಡುವುದು. ಆಹಾರ ತಯಾರಿಕೆಯಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಬೇಕು. ಪ್ರತಿ ಮಾಹೆಯಲ್ಲೂ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಬೇಕು. ನಿರ್ಮಲ ಕಿಟ್, ಸಿರಿಗಂಧ ಕಿಟ್, ಇನ್ನಿತರ ವಸ್ತುಗಳ ಅವಧಿ ಮುಗಿದಿರುವುದನ್ನು ಖಚಿತಪಡಿಸಿಕೊಂಡು ಒದಗಿಸಬೇಕು. ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ದುರಸ್ಥಿಗೊಳಿಸುವುದು/ ಸ್ಥಳಾಂತರಿಸುವ ಕಡೆ ಗಮನ ಹರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.