ಜಿಲ್ಲೆ

ಶೂನ್ಯ ತ್ಯಾಜ್ಯ ಪ್ರವಾಸೋದ್ಯಮ ಮುನ್ನೆಲೆಗೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಇತ್ತೀಚಿನ ಕೆಲವು ದಶಕಗಳಿಂದ ಕೊಡಗು ಪ್ರವಾಸೋದ್ಯಮವನ್ನೇ ಉಸಿರಾಡುತ್ತಿದೆ. ಪ್ರವಾಸೋದ್ಯಮ ಜಿಲ್ಲೆಯ ಪ್ರಮುಖ ವಾಣಿಜ್ಯ ಚಟುವಟಿಕೆಯಾಗಿ ಗುರುತಿಸಿಕೊಂಡಿದೆ. ಸಾಕಷ್ಟು ಜನರ ಬದುಕನ್ನು ಕೂಡ ಬದಲಾಯಿಸಿದೆ. ಮತ್ತೊಂದು ಕಡೆ ಪ್ರವಾಸೋದ್ಯಮದ ಅನಿಯಂತ್ರಿತ ಬೆಳವಣಿಗೆ ಪ್ರಜ್ಞಾವಂತರ ಆತಂಕಕ್ಕೆ ಕಾರಣವಾಗಿದೆ.

ಪರಿಸರಕ್ಕೆ ಪೂರಕ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವಂತೆ ಒತ್ತಾಯ ಕೇಳಿಬರುತ್ತಿದೆ. ಇದರ ಒಂದು ಹೆಜ್ಜೆಯಾಗಿ ಜಿಲ್ಲಾಡಳಿತ ಈಗ ಶೂನ್ಯ ತ್ಯಾಜ್ಯ ಪ್ರವಾಸ ಪರಿಕಲ್ಪನೆ ಜಾರಿಗೆ ಮುಂದಾಗಿದೆ. ಕೊಡಗು ಎಂದ ಕೂಡಲೇ ನೆನಪಾಗುವುದು ನಿತ್ಯ ಹರಿದ್ವರ್ಣದ ದಟ್ಟಕಾಡು, ಬೆಟ್ಟ, ಗುಡ್ಡ, ಧುಮ್ಮಿಕ್ಕಿ ಹರಿಯುವ ಜಲಧಾರೆಗಳು, ಮಳೆಗಾಲದ ಬಿರುಸು ಮಳೆ, ಎದುರಿಗೆ ಇರುವವರು ಕಾಣಿಸದಷ್ಟು ಗಾಢವಾಗಿ ಕವಿಯುವ ಮಂಜು... ಹಾಗಾಗಿಯೇ ದಕ್ಷಿಣದ ಕಾಶ್ಮೀರ, ಭಾರತದ ಸ್ಕಾಟ್‌ಲ್ಯಾಂಡ್ ಎನ್ನುವ ಅನ್ವರ್ಥಕ ಹೆಸರುಗಳೂ ಇವೆ. ಇವುಗಳನ್ನು ಅನುಭವಿಸುವುದಕ್ಕಾಗಿಯೇ ಪ್ರವಾಸಿಗರು ಕೊಡಗಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆದರೆ ಈಗಿನ ಬೆಳವಣಿಗೆಗಳನ್ನು ಗಮನಿಸಿದರೆ ಜಿಲ್ಲೆಯ ಈ ಪರಿಸರ ಹೀಗೆಯೇ ಇರುತ್ತದೆ ಎನ್ನುವುದಕ್ಕೆ ಆಗದಂಥ ಸ್ಥಿತಿ ತಲುಪಿದೆ.

ಎರಡೂವರೆ ದಶಕದ ಹಿಂದಿನ ತನಕವೂ ಕೊಡಗು ಪ್ರವಾಸಿತಾಣವಾಗಿ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿರಲಿಲ್ಲ. 2004ರಲ್ಲಿ ದೇಶದ ಕರಾವಳಿಗೆ ಸುನಾಮಿ ಅಪ್ಪಳಿಸಿದ ನಂತರದ ದಿನಗಳಲ್ಲಿ ಕರಾವಳಿ ಪ್ರವಾಸೋದ್ಯಮಕ್ಕೆ ಆದ ಹಿನ್ನಡೆ ಕೊಡಗಿನಂಥ ಮಲೆನಾಡಿನ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆ ಚಿಗುರಿಕೊಳ್ಳಲು ಅವಕಾಶವಾಯಿತು. ಅಲ್ಲಿಂದ ಈಚೆಗೆ ಜಿಲ್ಲೆಯ ಪ್ರವಾಸೋದ್ಯಮ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿದೆ. 2018, 19 ಹಾಗೂ 20ರ ಪ್ರಾಕೃತಿಕ ವಿಕೋಪ ಮತ್ತು ಕೋವಿಡ್ 19 ಸ್ವಲ್ಪ ಮಟ್ಟಿಗೆ ಪರಿಣಾಮ ಬೀರಿದರೂ ಈಗ ಅದೆಲ್ಲವನ್ನೂ ಮೀರಿ ಕೊಡಗಿನಲ್ಲಿ ಪ್ರವಾಸೋದ್ಯಮ ವಿಜೃಂಭಿಸುತ್ತಿದೆ.

ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಪ್ರವಾಸೋದ್ಯಮದ ಲಗಾಮಿಲ್ಲದ ಬೆಳವಣಿಗೆ ಕೊಡಗಿನ ಭವಿಷ್ಯದ ಬಗ್ಗೆ ಪ್ರಜ್ಞಾವಂತರಲ್ಲಿ ಚಿಂತನೆಗೆ ಕಾರಣವಾಗಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗೆ ಯಾರ ವಿರೋಧವೂ ಇಲ್ಲ. ಆದರೆ 2018,19,20ರಲ್ಲಿ ನಡೆದ ಪ್ರಾಕೃತಿಕ ವಿಕೋಪಗಳಿಗೆ ಪರಿಸರಕ್ಕೆ ಪೂರಕವಲ್ಲದ ಅನಿಯಂತ್ರಿತ ಚಟುವಟಿಕೆಗಳೇ ಕಾರಣ ಎನ್ನುವ ವಾದ ಮುಂದಿಡುವ ಪರಿಸರವಾದಿಗಳು ಜವಾಬ್ದಾರಿಯುತ ಪ್ರವಾಸೋದ್ಯಮಕ್ಕೆ ಒತ್ತು ಕೊಡುವಂತೆ ಬೇಡಿಕೆ ಮುಂದಿಟ್ಟಿದ್ದಾರೆ. ಈ ನಿಟ್ಟಿನಲ್ಲಿ ಕೊಡಗು ಕೃಷಿ ವಿಜ್ಞಾನ ವೇದಿಕೆಯಂಥ ಸ್ಥಳೀಯ ಪರಿಸರಾಸಕ್ತ ಸಂಘಟನೆ ಮತ್ತು ವ್ಯಕ್ತಿಗಳು ಸಾಕಷ್ಟು ಪ್ರಯತ್ನಗಳನ್ನೂ ನಡೆಸುತ್ತಿದ್ದಾರೆ.

ಜನಸಾಮಾನ್ಯರಲ್ಲಿ ಈಗಾಗಲೇ ಪರಿಚಯ ಇರುವ ಪರಿಸರ ಪ್ರವಾಸೋದ್ಯಮ ಮತ್ತು ಹಸಿರು ಪ್ರವಾಸೋದ್ಯಮ ಎಂಬ ಪದಗಳು ಬಹಳ ಹಿಂದಿನಿAದಲೇ ಚಾಲ್ತಿಯಲ್ಲಿದೆ. ಇದರ ಮುಂದುವರಿದ ಭಾಗವಾಗಿ 'ಜವಾಬ್ದಾರಿಯುತ ಪ್ರವಾಸೋದ್ಯಮ' ಪರಿಕಲ್ಪನೆ ಇತ್ತೀಚಿನ ವರ್ಷಗಳಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದೆ. ಪರಿಸರ ಅಥವಾ ಹಸಿರು ಪ್ರವಾಸೋದ್ಯಮ ಪ್ರಕೃತಿಗೆ ಪೂರಕವಾದರೂ ಇದು ಸೀಮಿತ ಅರ್ಥವನ್ನು ಧ್ವನಿಸುವುದರಿಂದ ವಿಶಾಲ ವ್ಯಾಪ್ತಿಯ ಸುಸ್ಥಿರ ಪ್ರವಾಸೋದ್ಯಮ ಗುರುತಿಸಲು 'ಜವಾಬ್ದಾರಿಯುತ ಪ್ರವಾಸೋದ್ಯಮ' ಎನ್ನುವ ಪದ ಬಳಕೆ ಮುನ್ನಲೆಗೆ ಬಂದಿದೆ.

ಸ್ಥಳೀಯ ಸಂಸ್ಕೃತಿ, ಪರಿಸರ ಹಾಗೂ ಸಮುದಾಯಗಳನ್ನು ಕಾಪಾಡಿಕೊಳ್ಳುತ್ತಲೇ ಇದನ್ನು ಜಗತ್ತಿಗೆ ತೆರೆದಿಡುವ ಮಹತ್ವದ ಉದ್ದೇಶ ಜವಾಬ್ದಾರಿಯುತ ಪ್ರವಾಸೋದ್ಯಮದ ಹಿಂದಿದೆ. ಈ ಮೂಲಕ ಸ್ಥಳೀಯರು ಆರ್ಥಿಕವಾಗಿಯೂ ಪ್ರಯೋಜನಗಳನ್ನು ಹೊಂದಿಕೊಳ್ಳುವ ಅವಕಾಶವಿದೆ. ಟ್ರಾವೆಲ್ ಆಪರೇಟರ್‌ಗಳು, ಹೋಟೆಲ್ ವ್ಯಾಪಾರ, ಸರ್ಕಾರ ಮತ್ತು ಸ್ಥಳೀಯರು ಹೀಗೆ ಎಲ್ಲರ ಸಹಯೋಗ ಜವಾಬ್ದಾರಿಯುತ ಪ್ರವಾಸೋದ್ಯಮಕ್ಕೆ ಅಗತ್ಯವಾಗಿದೆ. ಜವಾಬ್ದಾರಿಯುತ ಪ್ರವಾಸೋದ್ಯಮದಲ್ಲಿ ಪರಿಸರದ ಮೇಲೆ ಮಾನವ ಹಸ್ತಕ್ಷೇಪಕ್ಕೆ ಕಡಿವಾಣ ಹಾಕಲು ಮಾರ್ಗಸೂಚಿ ತಯಾರಿಸುವ ಬದ್ಧತೆಯೂ ಇರುತ್ತದೆ.

ಒಂದು ಕಡೆ ಜವಾಬ್ದಾರಿಯುತ ಪ್ರವಾಸೋದ್ಯಮದ ಪರಿಕಲ್ಪನೆ ನಿಧಾನಕ್ಕೆ ಜಿಲ್ಲೆಯಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿ ಆಗುತ್ತಿದ್ದರೂ ಪ್ರವಾಸೋದ್ಯಮದ ಬೇಕಾಬಿಟ್ಟಿ ಬೆಳವಣಿಗೆಯಿಂದ 'ಸ್ವಚ್ಛ ಕೊಡಗು, ಸುಂದರ ಕೊಡಗು' ಘೋಷಣೆಗೆ ಅಕ್ಷರಶಃ ತಿಲಾಂಜಲಿ ಇಡುವಂತಾಗಿದೆ. ಪ್ರವಾಸಿತಾಣಗಳಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯಗಳು ಹರಡಿಕೊಂಡು ಸ್ವಚ್ಛ ಕೊಡಗನ್ನು ಅಣಕಿಸುವಂತೆ ಕಂಡು ಬರುತ್ತಿದೆ. ಇದರಲ್ಲಿ ಪ್ರವಾಸಿಗರ ಪಾಲು ಕೂಡ ದೊಡ್ಡದಿದೆ. ಸಿಕ್ಕ ಸಿಕ್ಕಲ್ಲಿ ಕಸ ಎಸೆಯುವ ಪ್ರವಾಸಿಗರನ್ನು ಸ್ಥಳೀಯರು ಹಿಡಿದು ಬುದ್ಧಿ ಹೇಳಿದ ಘಟನೆಗಳೂ ಸಾಕಷ್ಟು ಇಲ್ಲಿ ನಡೆದಿದೆ. ಕೆಲವು ಕಡೆಗಳಲ್ಲಿ ಸ್ಥಳೀಯ ಆಡಳಿತಗಳು ದಂಡವನ್ನೂ ಹಾಕಿವೆ. ಆದರೂ ಕಸ ಎಸೆಯುವ ಚಾಳಿ ಮಾತ್ರ ಮುಂದುವರಿದಿದೆ.

ಪ್ರವಾಸಿ ತಾಣಗಳು ಸೇರಿದಂತೆ ಜಿಲ್ಲೆಯಾದ್ಯಂತ ಕಂಡು ಬರುವ ತ್ಯಾಜ್ಯ ಸಮಸ್ಯೆ ಪರಿಹಾರಕ್ಕೆ ಇದೀಗ ಜಿಲ್ಲಾಡಳಿತ ಶೂನ್ಯ ತ್ಯಾಜ್ಯ ಪ್ರವಾಸ ಪರಿಕಲ್ಪನೆ ಜಾರಿಗೆ ತರುತ್ತಿದೆ. ಇಲ್ಲಿ ಪ್ರಮುಖವಾಗಿ ಟ್ರಾವೆಲ್ ಆಪರೇಟರ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ಪರಿಕಲ್ಪನೆಯ ಭಾಗವಾಗಿ ಜಿಲ್ಲೆಯೊಳಗೆ ಓಡಾಡುವ ಟ್ಯಾಕ್ಸಿಗಳಿಗೆ ಪ್ರವಾಸೋದ್ಯಮ ಇಲಾಖೆ ವತಿಯಿಂದ ಬ್ಯಾಗ್‌ಗಳನ್ನು ವಿತರಿಸಲಾಗುತ್ತದೆ. ಟ್ಯಾಕ್ಸಿಯಲ್ಲಿ ಸಂಚರಿಸುವ ಪ್ರವಾಸಿಗರು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯದೆ ಟ್ಯಾಕ್ಸಿ ಒಳಗೆ ಇರುವ ಬ್ಯಾಗ್‌ಗಳಲ್ಲಿ ಸಂಗ್ರಹಿಸಬೇಕು. ನಂತರ ಈ ತ್ಯಾಜ್ಯವನ್ನು ನಿಗದಿತ ಜಾಗದಲ್ಲಿ ವಿಲೇವಾರಿ ಮಾಡಲಾಗುತ್ತದೆ.

ಪ್ರವಾಸಿ ತಾಣಗಳಲ್ಲಿ ತ್ಯಾಜ್ಯ ಸಮಸ್ಯೆ ಪರಿಹಾರಕ್ಕೆ ಪೂರಕ ಆಗಲಿದೆ ಎಂದು ನಂಬಲಾಗಿರುವ ಶೂನ್ಯ ತ್ಯಾಜ್ಯ ಪ್ರವಾಸ ಪರಿಕಲ್ಪನೆ ಯೋಜನೆ ಅಡಿ ಟ್ಯಾಕ್ಸಿ ಚಾಲಕರಿಗೆ ಬ್ಯಾಗ್‌ಗಳನ್ನು ವಿತರಿಸುವ ಕಾರ್ಯಕ್ರಮ ಸೋಮವಾರ (ಜು.21) ಪಾಲಿಬೆಟ್ಟದಲ್ಲಿ ನಡೆಯಲಿದೆ. ಈ ಪರಿಕಲ್ಪನೆ ಯಶಸ್ವಿ ಆಗಬೇಕಾದರೆ ಟ್ರಾವೆಲ್ ಆಪರೇಟರ್‌ಗಳ ಪಾತ್ರ ಮಹತ್ವದ್ದಾಗಿದ್ದು, ಟ್ಯಾಕ್ಸಿ ಚಾಲಕರು ತಮ್ಮ ಟ್ಯಾಕ್ಸಿಯಲ್ಲಿ ಸಂಚರಿಸುವ ಪ್ರವಾಸಿಗರು ಹೊರಗೆ ಎಲ್ಲೂ ತ್ಯಾಜ್ಯ ಎಸೆಯದೇ ಪ್ರವಾಸೋದ್ಯಮ ಇಲಾಖೆ ಮುಖಾಂತರ ಕೊಟ್ಟಿರುವ ಬ್ಯಾಗ್‌ಗಳಿಗೇ ಹಾಕುವಂತೆ ನೋಡಿಕೊಳ್ಳಬೇಕಿದೆ.

ಅನಿಯಂತ್ರಿತ ಪ್ರವಾಸೋದ್ಯಮದಿಂದ ಜಿಲ್ಲೆಯ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಗಳಿಂದಾಗಿ ಪ್ರವಾಸಿಗರ ಮೇಲೆಯೇ ಅಸಹನೆ ಮೂಡುವ ಸ್ಥಿತಿ ನಿರ್ಮಾಣ ಆಗುತ್ತಿದೆ. ಹೆಚ್ಚುತ್ತಲೇ ಇರುವ ಪ್ರವಾಸಿಗರ ದಟ್ಟಣೆಯಿಂದಾಗಿ ಸ್ಥಳೀಯರು ಟ್ರಾಫಿಕ್ ಸೇರಿದಂತೆ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಒಂದು ಕಡೆಯಲ್ಲಿ ಪ್ರವಾಸೋದ್ಯಮಿಗಳು ಕೊಡಗಿಗೆ ಪ್ರವಾಸಿಗರನ್ನು ಆಹ್ವಾನಿಸುತ್ತಿದ್ದರೆ, ಮತ್ತೊಂದು ಕಡೆಯಲ್ಲಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಕಡಿಮೆ ಮಾಡಿ ಎನ್ನುವ ಆಂದೋಲನ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. 'ಸಮೂಹ ಪ್ರವಾಸೋದ್ಯಮ ಕೊಡಗನ್ನು ನಾಶ ಮಾಡುತ್ತಿದೆ. ಜಿಲ್ಲೆಗೆ ಕಡಿಮೆ ಸಂಖ್ಯೆಯಲ್ಲಿ ಭೇಟಿ ಕೊಡಿ, ಕೊಡಗನ್ನು ಉಳಿಸಿ,' ಎನ್ನುವ ಸಂದೇಶ ಇರುವ ಪೋಸ್ಟರ್‌ಗಳು ಹರಿದಾಡುತ್ತಿದೆ. ಈ ಬೆಳವಣಿಗೆ ಕೊಡಗಿನ ಪ್ರವಾಸೋದ್ಯಮಕ್ಕೆ ಎಚ್ಚರಿಕೆಯ ಗಂಟೆಯೂ ಹೌದು ಎಂದು ವಿಶ್ಲೇಷಿಸಲಾಗುತ್ತಿದೆ.

ಶ್ರೀಮಂತ ಪರಿಸರ ಹೊಂದಿರುವ ಕೊಡಗಿನ ಸೌಂದರ್ಯ ಉಳಿಯಬೇಕಾದರೆ ಇಲ್ಲಿ ಸ್ವಚ್ಛತೆಗೆ ಆದ್ಯತೆ ಕೊಡಬೇಕು. ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೂ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಈ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಶೂನ್ಯ ತ್ಯಾಜ್ಯ ಪ್ರವಾಸದ ಪರಿಕಲ್ಪನೆಯಲ್ಲಿ ಜಿಲ್ಲಾಧಿಕಾರಿ ಜಾರಿಗೊಳಿಸಿದ್ದಾರೆ. ಇದರ ಭಾಗವಾಗಿ ಟ್ಯಾಕ್ಸಿಗಳಿಗೆ ಬ್ಯಾಗ್‌ಗಳನ್ನು ವಿತರಿಸಲಾಗುವುದು. ಪ್ರವಾಸಿಗರು ಟ್ಯಾಕ್ಸಿಗಳಲ್ಲಿ ಸುತ್ತಾಡುವ ಸಂದರ್ಭ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಿಕ್ಕಸಿಕ್ಕಲ್ಲಿ ಎಸೆಯುವ ಬದಲು ಈ ಬ್ಯಾಗ್‌ಗಳಲ್ಲಿ ಸಂಗ್ರಹಿಸಿ ಸೂಕ್ತ ಸ್ಥಳದಲ್ಲಿ ವಿಲೇವಾರಿ ಮಾಡಬೇಕು.

ಅನಿತಾ ಭಾಸ್ಕರ್, ಉಪನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ ಕೊಡಗು