ಬ್ಯಾಡಗಿ: ಅಲ್ಪ ಜಮೀನಿನಲ್ಲೇ ಸಾವಯವ, ಒಣಬೇಸಾಯ ಪದ್ಧತಿಯಲ್ಲಿ ವಿವಿಧ ಗಿಡ ಮರ, ಗಡ್ಡೆಗೆಣಸು, ಇತರ ಬೆಳೆ ಬೆಳೆದು ಅಧಿಕ ಲಾಭ ಪಡೆಯುವ ಮೂಲಕ ಇಲ್ಲೊಬ್ಬ ಯುವ ರೈತ ಸದ್ದಿಲ್ಲದೆ ಸಾಧನೆ ಮಾಡುತ್ತಿದ್ದಾರೆ.
ಶಿಗ್ಗಾಂವಿ ತಾಲೂಕಿನ ಮುಗಳಿ ಗ್ರಾಮದ ಯುವ ಕೃಷಿಕ ನಾಗರಾಜ ಹುಲಗೂರ ಈ ಸಾಧಕ. ಇವರು ಒಂದು ಎಕರೆ ಜಮೀನು ಹಾಗೂ ಮನೆ ಬಳಿಯ 2 ಗುಂಟೆ ಜಾಗದಲ್ಲಿ ಸಾಂಪ್ರದಾಯಿಕ ಕೃಷಿಗೆ ಹೊಸ ಮೆರುಗು ನೀಡಿದ್ದಾರೆ. ಒಂದು ಎಕರೆಯಲ್ಲಿ ಕೃಷಿ ಹೊಂಡ, ಎರೆಹುಳು ತೊಟ್ಟಿ, ಜಮೀನಿನ ಅಂಚಿನಲ್ಲಿ 500ಕ್ಕೂ ಅಧಿಕ ಗಿಡಮರ ಬೆಳೆಸಿ, ಶೂನ್ಯ ಬಂಡವಾಳ ಕೃಷಿ ಪದ್ಧತಿ ಅನುಸರಿಸುತ್ತಿದ್ದಾರೆ. ಎಲ್ಲ ಬೆಳೆಗಳಿಗೆ ಗಿಡಗಳ ತ್ಯಾಜ್ಯಗಳೇ ಗೊಬ್ಬರವಾಗಿ ಬಳಕೆಯಾಗಿದ್ದು, ರಾಸಾಯನಿಕಮುಕ್ತ ಭೂಮಿಯಾಗಿ ಪರಿವರ್ತನೆಯಾಗಿದೆ.
ಒಣಭೂಮಿಯಲ್ಲಿ ಮಾವು, ಶುಂಠಿ, ಅರಿಶಿನ, ಬಳ್ಳಿ ಆಲೂಗಡ್ಡೆ, ಕಿಡ್ನಿ ಆಲೂ, ಚೈನೀಸ್ ಕೋಸು, ಮರಗೆಣಸು, ಜವಾರಿ ಅರಿಶಿಣ, ಕಸ್ತೂರಿ ಅರಿಶಿಣ ಸೇರಿ ಹಲವು ತಳಿ, ಸುವರ್ಣಗಡ್ಡೆ, ವಿವಿಧ ಶುಂಠಿ ತಳಿ, ಐದಾರು ನಮೂನೆಯ ಗೆಣಸಿನ ತಳಿಗಳನ್ನು ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಬೆಳೆದಿದ್ದಾರೆ.
ಇವರ ತೋಟದಲ್ಲಿ ಬೆಳೆದ ಮಾವು, ಶುಂಠಿ, ಪ್ರತಿಭಾ ಅರಿಶಿಣ ತಳಿ ಭಾರಿ ಬೇಡಿಕೆ ಪಡೆದಿವೆ. ಉತ್ಕೃಷ್ಟ ಸುವಾಸನೆಯ ಶುಂಠಿಯನ್ನು ಉಪ್ಪಿನಕಾಯಿಗೆ ಬಳಸಲಾಗುವ ಕಾರಣ ಹೆಚ್ಚಿನ ಬೇಡಿಕೆಯಿದೆ. ಅರಿಶಿಣವನ್ನು ತಾವೇ ಪುಡಿ ಮಾಡಿ ಮಾರಾಟ ಮಾಡುತ್ತಿದ್ದಾರೆ. ಸುಹಾಸನಿ ತಳಿಯ ಕರಿಬೇವು ಹೆಚ್ಚು ಸುಗಂಧದಿಂದ ಕೂಡಿದ್ದು, ಅಡುಗೆಗೆ ಹೆಚ್ಚು ಪ್ರಶಸ್ತವಾಗಿದೆ. ಬೇಡಿಕೆಯಿದ್ದಷ್ಟು ಹಸಿ ಕರಿಬೇವು ಸೊಪ್ಪು ಮಾರುತ್ತಾರೆ. ಉಳಿದ ಎಲೆಗಳ ಪೌಡರ್ ಸಿದ್ಧಪಡಿಸಿ ಪ್ಯಾಕೆಟ್ ಮೂಲಕ ಕಳುಹಿಸುತ್ತಾರೆ. ಇವರ ಬಳಿ ಕರಿಬೇವಿನ ಗಿಡದ ಹಲವು ವಿಶೇಷ ತಳಿಗಳಿವೆ.
ಅಪ್ಪಟ ಗೋಪ್ರೇಮಿ, ಆಚಾರ ವಿಚಾರಗಳನ್ನು ರೂಢಿಸಿಕೊಂಡ ನಾಗರಾಜ ಹುಲಗೂರ, ತಂದೆಯ ಇಚ್ಛೆಯಂತೆ ದೇಶಿ ತಳಿ ಗೋವು ಸಾಕಿದ್ದಾರೆ. ಹಾಲನ್ನು ಮನೆಗೆ ಬಳಸಿದರೆ, ಗೋವಿನ ಗಂಜಲು ಹಾಗೂ ಸಗಣಿಯಿಂದ ಸಾವಯವ ಗೊಬ್ಬರ ಹಾಗೂ ಜೀವಾಮೃತ ತಯಾರಿಸಿ ಬೆಳೆಗಳಿಗೆ ನೀಡುತ್ತಾರೆ. ತಂದೆಯವರು ಗೋವಿನ ಮೂತ್ರವನ್ನು ನೇರವಾಗಿ ಬೆಳೆಗಳಿಗೆ ಹಾಕುತ್ತಿದ್ದರು. ನಾನು ಜೀವಾಮೃತವಾಗಿ ಪರಿವರ್ತಿಸಿ ಬಳಸುತ್ತಿದ್ದು, ಎಲ್ಲ ಬೆಳೆಗಳು ಹುಲುಸಾಗಿ, ಸಮೃದ್ಧವಾಗಿ ಬೆಳೆದುನಿಂತಿವೆ ಎಂದು ನಾಗರಾಜ ವಿವರಿಸುತ್ತಾರೆ. ಹೊಲದಲ್ಲಿರುವ ಎರೆಹುಳು ತೊಟ್ಟಿಗಳು ಬೆಳೆಗಳಿಗೆ ಆಸರೆಯಾಗಿವೆ. ನಯಾಪೈಸೆ ಖರ್ಚು ಮಾಡದೇ ಬರುವ ಎಲ್ಲ ಹಣ ಲಾಭವಲ್ಲದೆ ಮತ್ತೇನು ಎನ್ನುವ ನಾಗರಾಜ, ಶೂನ್ಯ ಬಂಡವಾಳ ಪದ್ಧತಿ ಕುರಿತು ಆಸಕ್ತರಿಗೆ ಮಾರ್ಗದರ್ಶನವನ್ನೂ ಮಾಡುತ್ತಾರೆ.
ಮನೆಯಲ್ಲಿ ದೇಶಿ ಬೀಜ ಬ್ಯಾಂಕ್ ಸ್ಥಾಪಿಸಿದ್ದಾರೆ. ಮೈಸೂರಿನ ಸಹಜ ಸಮೃದ್ಧ ಸಂಸ್ಥೆ ಹಾಗೂ ದೇಶಿ ಕೃಷಿಕರ ಬಳಗ ಸೇರಿದಂತೆ ಹಲವು ಅರ್ಗ್ಯಾನಿಕ್ ಸಂಸ್ಥೆಗಳು ಆಯೋಜಿಸುವ ಸೊಪ್ಪು, ಗಡ್ಡೆಗೆಣಸುಗಳ ಮೇಳಗಳಲ್ಲಿ ಪಾಲ್ಗೊಂಡು ಪ್ರದರ್ಶನ ನೀಡಿದ್ದಾರೆ. ತಾಲೂಕು ಹಾಗೂ ಜಿಲ್ಲೆಯ ವಿವಿಧ ಕಾರ್ಯಕ್ರಮಗಳಲ್ಲಿ ಯುವ ಕೃಷಿಕನ ಸಾಧನೆಗೆ ಪುರಸ್ಕಾರ ಲಭಿಸಿವೆ. ಒಂದು ಎಕರೆಯಲ್ಲಿಯೇ ವಿವಿಧ ಬೆಳೆಯ ಮೂಲಕ ವಾರ್ಷಿಕ ವಾರ್ಷಿಕ 2 ಲಕ್ಷ ರೂಪಾಯಿಗೂ ಅಧಿಕ ಆದಾಯ ಗಳಿಸುತ್ತ ಸಾಲವಿಲ್ಲದೆ ಕೃಷಿ ಪಯಣ ನಡೆಸಿದ್ದಾರೆ.
ನಾಗರಾಜ ತಮ್ಮ ಮನೆಯ ಹಿತ್ತಲ 2 ಗುಂಟೆ ಜಾಗದಲ್ಲಿ ಹಲವು ಗಿಡ, ಬಳ್ಳಿ ಬೆಳೆಸಿದ್ದಾರೆ. ಕಮಾನು ಮಾದರಿ ಹಂದರದಲ್ಲಿ ಕಾಡು ಬಸಳೆ ಬಳ್ಳಿ ಸೇರಿದಂತೆ ವಿವಿಧ ಬಳ್ಳಿಗಳನ್ನು ಹಬ್ಬಿಸಿದ್ದು, ಹಸಿರಿನಿಂದ ಕಂಗೊಳಿಸುತ್ತ ಸ್ವಾಗತಿಸುತ್ತವೆ. ಕೈತೋಟದಲ್ಲಿ ಅಜೋಲ, ಬಾಳೆ, ಮಾವು, ನುಗ್ಗೆ, ತೆಂಗು, ತರಕಾರಿ ಬೆಳೆದಿದ್ದಾರೆ. ಹಿತ್ತಲಲ್ಲಿ ಸಣ್ಣದಾದ ನರ್ಸರಿಯಲ್ಲಿ ಅಲಂಕಾರಿಕ, ವಿವಿಧ ಜಾತಿಯ ತುಳಸಿ ಸಸಿಗಳು, ಔಷಧೀಯ ಸಸಿಗಳಾದ ಶಂಖಪುಷ್ಪ, ಅಶ್ವಗಂಧ, ಮಧುನಾಶಿನಿ, ಚಕ್ರಮುನಿ, ಲಕ್ಕಿಗಿಡ, ನೆಲನೆಲ್ಲಿ, ಮುಂಗಾರು ಬಳ್ಳಿ, ಗಣಕೆ ಸಸಿ, ಅಮೃತ ಬಳ್ಳಿ, ದೊಡ್ಡ ಪತ್ರೆ, ಕಾಡು ಕೋತಂಬರಿ, ಮಜ್ಜಿಗೆ ಸೊಪ್ಪು ಇತ್ಯಾದಿಗಳಿವೆ. ಇವರ ಕೃಷಿ ಸಾಧನೆ ವೀಕ್ಷಿಸಲು ಆಗಮಿಸುವ ಎಲ್ಲರಿಗೂ ಒಂದೊಂದು ಸಸಿ ನೀಡಿ ಪ್ರೀತಿಯಿಂದ ಮಾಹಿತಿ ನೀಡುತ್ತಿದ್ದಾರೆ.
ಎರಡು ವರ್ಷದ ಹಿಂದೆ ಸಾವಯವ ಕೃಷಿಕರ ಸಾಧನೆ ಹಾಗೂ ನೀರಿಲ್ಲದೆ ಒಣಬೇಸಾಯ ಬೆಳೆ ಕಂಡು ಏನಾದರೂ ಮಾಡಬೇಕೆಂದು ಪಣ ತೊಟ್ಟಿದ್ದೆ. ಈಗ ನನ್ನ ಮಾದರಿ ಕೃಷಿ ಯೂಟೂಬ್ ಚಾನಲ್ನಲ್ಲಿಯೂ ಸಾಕಷ್ಟು ಪ್ರಚಾರವಾಗಿದ್ದು, ದೂರದಿಂದಲೂ ವೀಕ್ಷಣೆಗೆ ಬರುತ್ತಿದ್ದಾರೆ. ಗಡ್ಡೆಗೆಣಸುಗಳು, ಕಾಡು ಕೃಷಿಯಿಂದ ರೈತರು ಸಾಲವಿದಲ್ಲದೇ ಜೀವನ ಸಾಗಿಸಬಹುದು. ಯುವ ಸಮುದಾಯ ಪಟ್ಟಣಕ್ಕೆ ತೆರಳುವ ಬದಲು ಗ್ರಾಮೀಣ ಪ್ರದೇಶದಲ್ಲಿ ಸ್ವಾವಲಂಬಿ ಬದುಕು ರೂಢಿಸಿಕೊಳ್ಳಬೇಕು. ನೈಜ ಕೃಷಿಕರನ್ನು ಕೃಷಿ ಇಲಾಖೆ ಗುರುತಿಸಿ, ವಿವಿಧ ಸೌಲಭ್ಯ ಒದಗಿಸಬೇಕು. | ನಾಗರಾಜ ಹುಲಗೂರ, ಯುವ ಕೃಷಿಕ ಮುಗಳಿ ಗ್ರಾಮ