ಜಿಲ್ಲೆ

ಅಭಿವೃದ್ಧಿ ಶೂನ್ಯ ಕಾಂಗ್ರೆಸ್ ಸರ್ಕಾರ

ದೀಪಕ ತಲವಾಯಿ

ಅಳ್ನಾವರ: ರಾಜ್ಯ ಕಾಂಗ್ರೆಸ್ ಸರ್ಕಾರ ಸುಳ್ಳಿನ ಕಂತೆಯ ಹಾಗೂ ಅಭಿವೃದ್ಧಿ ಶೂನ್ಯ ಸರ್ಕಾರ ಆಗಿದೆ ಎಂದು ಧಾರವಾಡ ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ ಹೇಳಿದರು.

ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಘಟಗಿ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಬೇಕಾದ ಮೂಲ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ಸುಸಜ್ಜಿತ ಸರ್ಕಾರಿ ಆಸ್ಪತ್ರೆ, ಶಾಲೆ-ಕಾಲೇಜುಗಳು ಹಾಗೂ ಪ್ರಮುಖ ಹೆದ್ದಾರಿಗಳ ದುರಸ್ತಿ ನಡೆಸದೆ ಬಿಜೆಪಿಯ ಹಿಂದಿನ ಆಡಳಿತಾವಧಿಯಲ್ಲಿ ಮಾಜಿ ಶಾಸಕ ದಿ. ಸಿ.ಎಂ. ನಿಂಬಣ್ಣವರ ಅವರು ಸರ್ಕಾರದಿಂದ ಅಪಾರ ಪ್ರಮಾಣದಲ್ಲಿ ತಂದಿದ್ದ ಅನುದಾನದಲ್ಲಿ ನಡೆಸಲಾದ ಅಂಗನವಾಡಿ ಕಟ್ಟಡ, ನಾಡ ಕಚೇರಿ, ಪಶು ಆಸ್ಪತ್ರೆ ಹಾಗೂ ಬೀದಿ ದೀಪಗಳ ಮತ್ತು ತಾಲೂಕಾಡಳಿತ ಕಟ್ಟಡ ಕಾಮಗಾರಿಗಳನ್ನು ನಾನೇ ಅನುದಾನ ತಂದು ಕೈಗೊಂಡಿದ್ದೇನೆ ಎಂದು ಸಚಿವ ಸಂತೋಷ ಲಾಡ್ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ತಮ್ಮ ಶೋಕಿಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ವಿನಾಕಾರಣ ಟೀಕೆ ಮಾಡುತ್ತ ದೊಡ್ಡ ನಾಯಕರೆಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಅಳ್ನಾವರ -ಕಲಘಟಗಿ ಕ್ಷೇತ್ರದಲ್ಲಿ ಈ ಹಿಂದೆ ನಡೆಸಿದ ಅಭಿವೃದ್ಧಿ ಕಾರ್ಯಗಳ ಕಿರುಹೊತ್ತಗೆಯನ್ನು ನಿಂಗಪ್ಪ ಸುತಗಟ್ಟಿ ಬಿಡುಗಡೆಗೊಳಿಸಿದರು. ಎಂಎಸ್​ಆಯ್ಎಲ್ ಮಾಜಿ ನಿರ್ದೇಶಕ ಶಿವಾಜಿ ಡೊಳ್ಳಿನ, ಮಂಡಲ ಅಧ್ಯಕ್ಷ ಯಲ್ಲಪ್ಪ ಹುಲೇಪ್ಪನವರ, ಲಖನ ಬರಗುಂಡಿ, ಮಲ್ಲಪ್ಪ ಗಾಣಿಗೇರ, ಸಂದೀಪ ಪಾಟೀಲ, ಯಲ್ಲಾರಿ ಹುಬ್ಳಿಕರ, ನಾರಾಯಣ ಮೋರೆ, ಪ್ರವೀಣ ಪವಾರ, ಲಿಂಗರಾಜ ಮೂಲಿಮನಿ, ಪರಶುರಾಮ ರೆಡೆಕರ, ಪ್ರಕಾಶ ಗಾಣಿಗೇರ, ಕಾಶಿನಾಥ ಕೌಜಲಗಿ, ಪರಶುರಾಮ ಪಾಲಕರ, ಅರ್ಜುನ ಬೆನ್ನಾಳಕರ, ಇತರರಿದ್ದರು.