ದೇವನಹಳ್ಳಿ ಪ್ರವಾಸಿ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ನವಕರ್ನಾಟಕ ನಿರ್ಮಾಣ ಆಂದೋಲನದಡಿ ಜನರ ನಡುವೆ ಜನಾತಾ ಪ್ರಣಾಳಿಕೆ ಸಭೆಯಲ್ಲಿ ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಮಾಜಿ ಸಚಿವ ಸಿ.ಎಂ.ಇಬ್ರಾಹಿಂ, ಎಐಬಿಎಸ್‌ಪಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ನಂದಿಗುಂದ ಪಿ.ವೆಂಕಟೆಶ್ ಇತರರು ಇದ್ದರು. 
ಜಿಲ್ಲೆ

ಗ್ಯಾರಂಟಿಯಿಂದ ಅಭಿವೃದ್ಧಿ ಶೂನ್ಯ

ಬೆಂಗಳೂರು ಗ್ರಾಮಾಂತರ ಡೆಸ್ಕ್

ನವಕರ್ನಾಟಕ ನಿರ್ಮಾಣ ಆಂದೋಲನ- ಜನರ ನಡುವೆ ಪ್ರಣಾಳಿಕೆ ಚರ್ಚೆ

ದೇವನಹಳ್ಳಿ: ರಾಜ್ಯದಲ್ಲಿ ರಾಜಕಾರಣ ಬಹಳ ಕೆಟ್ಟಿದೆ. ಹಿಂದೆ ಬಿಜೆಪಿ ಆಡಳಿತದಲ್ಲಿ 40 ಪರ್ಸೆಂಟ್ ಪೇಸಿಎಂ ಎನ್ನುತ್ತಿದ್ದರು. ಈಗ ಕಾಂಗ್ರೆಸ್‌ನವರೇ 60 ಪರ್ಸೆಂಟ್ ಎಟಿಎಂ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ, ಸಿದ್ದರಾಮಯ್ಯ ಗ್ಯಾರಂಟಿ ಹೆಸರಲ್ಲಿ ಅಧಿಕಾರ ಹಿಡಿದರೂ ಅಭಿವೃದ್ದಿ ಕೆಲಸ ಆಗುತ್ತಿಲ್ಲ. ಭ್ರಷ್ಟಾಚಾರ ನಿಯಂತ್ರಣ ಆಗದ ಮಟ್ಟಕ್ಕೆ ಆಡಳಿತ ಯಂತ್ರಗಳು ಕೆಟ್ಟಿವೆ ಎಂದು ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಜಿಲ್ಲಾಮಟ್ಟದ ವಿವಿಧ ರಾಜಕೀಯ ಪಕ್ಷಗಳ, ಸಂಘಟನೆಗಳ ಮುಂಖಡರ ಸಹಯೋಗದೊಂದಿಗೆ ನವಕರ್ನಾಟಕ ನಿರ್ಮಾಣ ಆಂದೋಲನದಡಿ ಆಯೋಜಿಸಿದ್ದ ಜನರ ನಡುವೆ ಜನತಾ ಪ್ರಣಾಳಿಕೆ ಸಭೆ ಉದ್ಘಾಟಿಸಿ ಮಾತನಾಡಿದರು.

ಎರಡು ವರ್ಷದಿಂದ ಸಿಎಂ ಯಾವ ಅಭಿವೃದ್ಧಿ ಕೆಲಸಕ್ಕೂ ಹಣ ಇಟ್ಟಿಲ್ಲ. ಅಭಿವೃದ್ಧಿ ಶೂನ್ಯವಾಗಿದೆ. ಈ ರಾಜಕಾರಣಿಗಳು ಒಂದೊಂದು ಕ್ಷೇತ್ರದಲ್ಲಿ ತಮ್ಮದೇ ವಂಶದ ಆಡಳಿತ ಎಂಬಂತೆ ಮಾಡಿಕೊಂಡಿದ್ದಾರೆ. ಇಂದು ಗಾಂಧಿ ಬಂದು ಚುನಾವಣೆಗೆ ನಿಂತರೂ ಗೆಲ್ಲಲಾಗದ ಸ್ಥಿತಿ ನಿರ್ಮಿಸಿದ್ದಾರೆ. ಇದರಿಂದಾಗಿ ನಾವು ಜನಾಂದೋಲನದ ಮೂಲಕ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿ ಇಲ್ಲಿ ನೆರೆ ರಾಜ್ಯಗಳಂತೆ ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದೆ ಎಂಬುದನ್ನು ಮನವರಿಕೆ ಮಾಡಿ ಜನಾಭಿಪ್ರಾಯದೊಂದಿಗೆ ಹೊಸ ಚಿಂತನೆ ಹುಟ್ಟಿಹಾಕಲು ಆಂದೋಲನ ರೂಪಿಸಲಾಗುತ್ತಿದೆ ಎಂದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ವೆಂಕಟನಾರಾಯಣಪ್ಪ , ಕೆಂಚಪ್ಪಗೌಡ, ಜಿಲ್ಲಾ ಅಧ್ಯಕ್ಷ ಆರ್.ಪ್ರಸನ್ನ, ಜಿಲ್ಲಾ ಕಾರ್ಯದರ್ಶಿ ಬಿದಲೂರು ರಮೇಶ್, ತಾಲೂಕು ರೈತ ಸಂಘದ ಅಧ್ಯಕ್ಷ ಗಾರೆ ರವಿಕುಮಾರ್, ಗೌರವಾಧ್ಯಕ್ಷ ಮುನಿಶಾಮಪ್ಪ, ಹಸಿರು ಸೇನೆಯ ಶಶಿಧರ್ ಎಸ್, ಐಟಿ ರಾಮಾಂಜಿನಪ್ಪ , ನಾಗರಾಜ್, ಪುರಸಭಾ ಮಾಜಿ ಅಧ್ಯಕ್ಷ ಎಂ.ನಾರಾಯಣಸ್ವಾಮಿ ಉಪಸ್ಥಿತರಿದ್ದರು.

ಸರ್ಕಾರದ ವಿರುದ್ಧ ಇಬ್ರಾಹಿಂ ವಾಗ್ದಾಳಿ

ಬಿಜೆಪಿ ಸರಿಯಿಲ್ಲ ಎಂದು ಇವರನ್ನು ಜನ ಆಯ್ಕೆ ಮಾಡಿದರೆ, ಇವರು ಅವರಿಗಿಂತಲೂ ಒಂದು ಕೈ ಹೆಚ್ಚಾಗಿ ರಾಜ್ಯವನ್ನುಲೂಟಿ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.ಹೀಗಾಗಿ ಸ್ವಾಭಿಮಾನದ ಪ್ರಾದೇಶಿಕ ಪಕ್ಷ ರಚನೆ ಅಗತ್ಯವಿದೆ. ಜೆಡಿಎಸ್‌ನ 10-12 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ನಮಗೆ ಬಜೆಟ್‌ನಲ್ಲಿನ ಹಣ ಶೇ.80 ರೈತರ ಅಭಿವೃದ್ಧಿಗೆ ಬರಬೇಕು. ಕನ್ನಡಿಗರಿಗೆ ಉದ್ಯೋಗ ಮೀಸಲಿರಬೇಕು. 28 ಜಿಲ್ಲೆಗಳಲ್ಲಿ ನಾವು ಪ್ರವಾಸ ಮಾಡಿ ಜನಾಭಿಪ್ರಾಯ ಸಂಗ್ರಹಿಸಿ ನಂತರ 4 ಪ್ರಾದೇಶಿಕ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲು ಈ ಸಭೆಗಳನ್ನು ನಡೆಸುತ್ತಿದ್ದೇವೆ. ನಾವು ಸಿದ್ಧಾಂತಗಳನ್ನು ನಂಬಿದವರು, ವ್ಯಕ್ತಿ ಆಧಾರಿತ ರಾಜಕೀಯ ನಮಗೆ ಬೇಡ ಎಂದರು.

ದೇಶದ ಸಂಪತ್ತು ಲೂಟಿ

ಎಲ್ಲ ಜಾತಿ, ಧರ್ಮ ಜನಾಂಗದವರಿಗೂ ಸಮಬಾಳು, ಸಮಪಾಲು, ಸಮಾನ ಹಕ್ಕು ನೀಡಲು ಬಾಬಾ ಸಾಹೇಬ್ ಅಂಬೇಡ್ಕರ ಸಂವಿಧಾನ ಕೊಟ್ಟು ಹೋದರು. ಆದರೆ ಆಳುವ ಪಕ್ಷಗಳು ಸಂವಿಧಾನದ ಆಶಯಗಳನ್ನು ಮುಚ್ಚಿಟ್ಟು ಕುಟುಂಬಗಳ ಪ್ರಗತಿಗಾಗಿ ಕಾರ್ಪೋರೇಟ್ ಕಂಪನಿಗಳ ಕೈಗೊಂಬೆಗಳಾಗಿ ದೇಶದ ಸಂಪತ್ತು ಲೂಟಿ ಮಾಡುತ್ತಿವೆ ಎಂದು ಎಐಬಿಎಸ್‌ಪಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಕೃಷಿ ಭೂಮಿಗಳನ್ನು ಕಸಿದು ವಿದೇಶಿ ಕಂಪನಿಗಳಿಗೆ, ರಾಜಕಾರಣಿಗಳಿಗೆ ಕೊಡಲು ಹೊರಟಿದ್ದಾರೆ. ರೈತರನ್ನು ರಕ್ಷಿಸಿಕೊಳ್ಳಬೇಕಾದರೆ ನಮಗೆ ನಮ್ಮದೇ ಆದ ಸಮಾನ ಮನಸ್ಕರ ಪ್ರಾದೇಶಿಕ ಪಕ್ಷದ ಅಗತ್ಯ ಇದೆ ಎಂದರು.