ಜಿಲ್ಲೆ

ಸಾಂಸ್ಕೃತಿಕ ಪರಂಪರೆಯನ್ನು ಸಂಸ್ಕರಿಸುವ ಉದ್ದೇಶ : ರಕ್ಷಿತ್ ಶಿವರಾಂ ಅನಿಸಿಕೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ತುಳುವರನ್ನು ಜಾತಿ, ಮತ, ಧರ್ಮ ಭೇದವಿಲ್ಲದೆ ಬೆಸೆಯುವ ಶಬ್ದ ಡೆನ್ನನ ಡೆನ್ನಾನ. ಡೆನ್ನನ ಡೆನ್ನಾನ ಶಬ್ದ ತುಳುವರಿಗೆ ರೋಮಾಂಚಕ. ಎಲ್ಲ ಸಮುದಾಯಗಳಿಗೂ ಒಂದು ಸಾಂಸ್ಕೃತಿಕ ಹಿನ್ನೆಲೆ ಇದೆ. ಆದರೆ ಇಂದು ಸರಿಯಾದ ಆಚರಣೆ ಇಲ್ಲದೆ ನಿರ್ಲಕ್ಷ್ಯದಿಂದ ನಮ್ಮ ಸಾಂಸ್ಕೃತಿಕ ಹಿನ್ನೆಲೆಯನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದೇವೆ. ಯುವವಾಹಿನಿ ಸಂಘಟನೆ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಸಂಸ್ಕರಿಸುವ ಒಳ್ಳೆಯ ಉದ್ದೇಶದಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದೆ. ಯುವವಾಹಿನಿಯ ಎಲ್ಲ ಸದಸ್ಯರೂ ಅಭಿನಂದನಾರ್ಹರು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಬೆಸ್ಟ್ ಫೌಂಡೇಷನ್‌ನ ಅಧ್ಯಕ್ಷ ರಕ್ಷಿತ್ ಶಿವರಾಂ ಹೇಳಿದರು.

ಭಾನುವಾರ ಬೆಳ್ತಂಗಡಿಯ ಸಮಾಜ ಮಂದಿರದಲ್ಲಿ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಆಶ್ರಯದಲ್ಲಿ ಯುವವಾಹಿನಿ ಬೆಳ್ತಂಗಡಿ ಘಟಕದ ಆತಿಥ್ಯದಲ್ಲಿ ಬೆಳ್ತಂಗಡಿಯ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಸಹಯೋಗದಲ್ಲಿ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ’ಡೆನ್ನನ ಡೆನ್ನಾನ’ಗೆ ಚಾಲನೆ ನೀಡಿ ಮಾತನಾಡಿದರು.

ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ್ ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಬೈಲಬರಿ ಹರೀಶ್ ಕೆ.ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಮಂಗಳೂರು ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಅಸೋಸಿಯೇಟ್ ಪ್ರೊಫೆಸರ್ ಡಾ.ಹರ್ಷವರ್ಧನ್, ಮಂಗಳೂರು ಮಹಾನಗರಪಾಲಿ ಪ್ರತಿಪಕ್ಷ ನಾಯಕ ಅನಿಲ್ ಕುಮಾರ್, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಸುಮತಿ ಪ್ರಮೋದ್, ಸಂಘಟನೆಯ ಪ್ರಮುಖರಾದ ಪ್ರಶಾಂತ್ ಮಚ್ಚಿನ, ಹರೀಶ್ ಕಳಿಯ, ಸದಾಶಿವ ಪೂಜಾರಿ ಊರ, ಯಶೋಧರ ಮುಂಡಾಜೆ, ಜಗದೀಶ್‌ಚಂದ್ರ ಡಿ.ಕೆ.ಉಪಸ್ಥಿತರಿದ್ದರು.

ಸ್ಮಿತೇಶ್ ಬಾರ್ಯ ಮಾರ್ಗದರ್ಶನದಲ್ಲಿ ಪ್ರಜ್ಞಾ ಓಡಿಲ್ನಾಳ ನಿರೂಪಿಸಿ ಡೆನ್ನನ ಡೆನ್ನಾನ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮದ ಪ್ರಧಾನ ಸಂಚಾಲಕ ಪ್ರಶಾಂತ್ ಮಚ್ಚಿನ ಸ್ವಾಗತಿಸಿದರು. ಯುವವಾಹಿನಿ ಬೆಳ್ತಂಗಡಿ ಘಟಕದ ಮಾಜಿ ಅಧ್ಯಕ್ಷ ಹಾಗೂ ಬೆಳ್ತಂಗಡಿ ಗುರುದೇವ ಸೊಸೈಟಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶ್ವಥ್ ವಂದಿಸಿದರು.

ಸಂಘಟನೆಯಿಂದ ಸಮಾಜ ಬಲಿಷ್ಠವಾಗುತ್ತದೆ. ವಿದ್ಯೆ, ಉದ್ಯೋಗ ಹಾಗೂ ಸಂಪರ್ಕದ ಸದುದ್ದೇಶದಿಂದ ಸಂಘಟಿತವಾದ ಯುವವಾಹಿನಿ ಇಂದು ಸಮಾಜದ ಯುವಕರನ್ನು ಉತ್ತಮವಾಗಿ ಸಂಘಟಿಸುತ್ತಿದೆ. ಜಯವಿಕ್ರಮ್, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ https://www.vijayavani.net/application-invitation-from-scheduled-category-students https://www.vijayavani.net/painting-competition-at-mite-college