ಮದ್ದೂರು: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಯುವನಿಧಿಯನ್ನು ನಿರುದ್ಯೋಗಿಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ತಹಸೀಲ್ದಾರ್ ಕೆ.ಎಸ್.ಸೋಮಶೇಖರ್ ತಿಳಿಸಿದರು.
ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಗುರುವಾರ ಯುವನಿಧಿ ಪೋಸ್ಟರ್ ಬಿಡುಗಡೆ ಹಾಗೂ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರ 2022-23ರ ಸಾಲಿನಲ್ಲಿ ಪದವಿ ಮುಗಿಸಿದ ನಿರುದ್ಯೋಗ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 3 ಸಾವಿರ ರೂ. ಹಾಗೂ ಡಿಪ್ಲೊಮಾ ಮುಗಿಸಿದ ವಿದ್ಯಾರ್ಥಿಗಳಿಗೆ 1500 ರೂ. ನೀಡುವ ಯೋಜನೆ ಜ.26ರಿಂದ ಆರಂಭವಾಗಲಿದೆ. ತಿಂಗಳ 25ನೇ ತಾರೀಖಿನೊಳಗೆ ಯುವನಿಧಿ ಯೋಜನೆ ಹಣವನ್ನು ಬ್ಯಾಂಕ್ ಖಾತೆಗೆ ಹಾಕಲಾಗುವುದು. ನಿರುದ್ಯೋಗ ವಿದ್ಯಾರ್ಥಿಗಳು ಸೂಕ್ತ ಮಾಹಿತಿ ನೀಡಿ ನೋಂದಣಿ ಮಾಡಿಕೊಂಡು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಪ್ರಾಂಶುಪಾಲ ಕೆ.ಬಿ.ನಾರಾಯಣ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ನಾಗೇಂದ್ರ, ಗಂಗಾಧರೇಶ್ವರ, ವಿಜಯಲಕ್ಷ್ಮೀ ಪ್ರವೀಣ್ ಇದ್ದರು.