ಜಿಲ್ಲೆ

ಯುವಕರಿಗೆ ಉದ್ಯೋಗ ನೀಡಲು ಯೋಜನೆ: ಯುವಜನೋತ್ಸವದಲ್ಲಿ ಸಚಿವ ಕೆ.ಸಿ.ನಾರಾಯಣಗೌಡ ಮಾಹಿತಿ

ಮಂಡ್ಯ: ಯುವಜನರನ್ನು ಉದ್ಯಮಿಗಳನ್ನಾಗಿಸುವ ಸಲುವಾಗಿ ಸ್ವಾಮಿ ವಿವೇಕಾನಂದ ಸ್ವಸಹಾಯ ಸಂಘಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಕೆ.ಸಿ. ನಾರಾಯಣಗೌಡ ತಿಳಿಸಿದರು.

ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ತಲಾ 2 ಸ್ವ ಸಹಾಯ ಸಂಘಗಳನ್ನು ಸ್ಥಾಪಿಸಿ ಆ ಮೂಲಕ ಯುವಜನರ ಆರ್ಥಿಕ ಚಟುವಟಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ಪ್ರತಿಯೊಂದು ಸ್ವಸಹಾಯ ಸಂಘಕ್ಕೂ ತಲಾ 10 ಸಾವಿರ ರೂ. ಸಹಾಯಧನ ನೀಡಲಾಗುವುದು. ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಉದ್ಯಮ ಕೈಗೊಂಡಲ್ಲಿ ಅಂತಹ ಸಂಘಗಳಿಗೆ ಬ್ಯಾಂಕುಗಳಿಂದ 2ರಿಂದ ಮೂರ‌್ನಾಲ್ಕು ಲಕ್ಷ ರೂ. ಸಾಲ ಸೌಲಭ್ಯ ದೊರೆಯುತ್ತದೆ. ಇದರಲ್ಲಿ ಶೇ.50ರಷ್ಟು ಸಬ್ಸಿಡಿಯೂ ದೊರೆಯುವಂತೆ ಯೋಜನೆ ರೂಪಿಸಲಾಗಿದೆ. ಇದು ಭಾರತದಲ್ಲೇ ಮೊದಲ ಪ್ರಯೋಗವಾಗಿದೆ ಎಂದು ವಿವರಿಸಿದರು.

ಜಿಲ್ಲಾಧಿಕಾರಿ ಡಾ.ಎಚ್.ಎನ್. ಗೋಪಾಲಕೃಷ್ಣ ಮಾತನಾಡಿ, ಜಿಲ್ಲಾ ಮಟ್ಟದ ಯುವಜನೋತ್ಸವ ಮಂಡ್ಯದಲ್ಲಿ ನಡೆಯುತ್ತಿದೆ. ಸ್ಪರ್ಧಾಳುಗಳು ಉತ್ತಮ ಪ್ರದರ್ಶನ ನೀಡಿ ಭಾಗವಹಿಸಿ. ಸೋಲು-ಗೆಲುವು ಮುಖ್ಯವಲ್ಲ, ಬದಲಿಗೆ ಭಾಗವಹಿಸುವುದೇ ಮುಖ್ಯ. ಸೋತವರು ಮುಂದಿನ ವರ್ಷ ಮತ್ತೆ ಭಾಗವಹಿಸಲು ಅವಕಾಶ ಇದೆ. ಅದಕ್ಕೆ ಸರಿಯಾಗಿ ತರಬೇತಿ ಪಡೆಯುವಂತೆ ಸಲಹೆ ನೀಡಿದರು.

ಇಲ್ಲಿ ಆಯ್ಕೆಯಾದವರು ಚಿಕ್ಕಮಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಯುವ ಜನೋತ್ಸವದಲ್ಲಿ ಭಾಗವಹಿಸಿದ್ದಾರೆ. ಈ ಬಾರಿ ರಾಷ್ಟ ಮಟ್ಟದ ಯುವಜನೋತ್ಸವ ಕರ್ನಾಟಕದಲ್ಲೇ ನಡೆಯುವ ಸಾಧ್ಯತೆಗಳಿವೆ. ಇದಕ್ಕೆ ಸರಿಯಾದ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.

ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಜಿಪಂ ಸಿಇಒ ಶಾಂತಾ ಎಲ್.ಹುಲ್ಮನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರಾದ ನಾಗರಾಜು, ಸೋಮಶೇಖರ್, ಕುಮಾರ್ ಕೊಪ್ಪ, ಲಂಕೇಶ್ ಮಂಗಲ, ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂಪ್ರಕಾಶ್ ಇತರರಿದ್ದರು.