ಉಡುಪಿ: ಯುವಜನೋತ್ಸವ ಕಾರ್ಯಕ್ರಮದ ಅಂಗವಾಗಿ ಭಾನುವಾರ ಅಜ್ಜರಕಾಡು ಡಾ. ಜಿ.ಶಂಕರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ 5 ಕಿ.ಮೀ ವರೆಗೆ ಮ್ಯಾರಥಾನ್ ನಡೆಯಿತು.
ಏಡ್ಸ್ ಬಗ್ಗೆ ಅರಿವು ,ಸೇವಾ ಸೌಲಭ್ಯಗಳ ಮಾಹಿತಿ,ಕಳಂಕ ಮತ್ತು ತಾರತಮ್ಯವನ್ನು ತಡೆಗಟ್ಟುವುದು, ಏಡ್ಸ್ ಕಾಯ್ದೆ 2017 , ಎಸ್.ಟಿ.ಐ ಇತ್ಯಾದಿಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಈ ಓಟದ ಮುಖ್ಯ ಉದ್ದೇಶವಾಗಿದ್ದು, ಪುರುಷರ ವಿಭಾಗದ 5 ಕಿ,ಮೀ ಮ್ಯಾರಥಾನ್ ಓಟಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಶಾಂತವೀರ ಶಿವಪ್ಪ ಹಾಗೂ ಮಹಿಳೆಯರ ವಿಭಾಗದ 5 ಕಿ.ಮೀ. ಮ್ಯಾರಥಾನ್ ಓಟಕ್ಕೆ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕು.ಕ.ಅಧಿಕಾರಿ ಡಾ. ನಾಗಭೂಷಣ್ ಉಡುಪ, ಜಿಲ್ಲಾ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ.ಚಿದಾನಂದ್ ಸಂಜು , ಡಾ ಜಿ.ಶಂಕರ್ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ರಾಜೇಂದ್ರ , ದೈಹಿಕ ಶಿಕ್ಷಣ ನಿರ್ದೇಶಕ ಪಾಟ್ಕರ್. ಅಮೆಚೂರ್ ಅಥ್ಲೆಟಿಕ್ ಉಡುಪಿಯ ಕಾರ್ಯದರ್ಶಿ ದಿನೇಶ್, ಲಯನ್ಸ್ ಕ್ಲಬ್ನ ಧನುಷ್, ರೋಟರಿ ಕ್ಲಬ್ ಉಡುಪಿ ಮಿಡ್ ಟೌನ್ ಅಧ್ಯಕ್ಷ ಭುಜಂಗಶೆಟ್ಟಿ, ರೋಟರಿ ಕ್ಲಬ್ ಕಲ್ಯಾಣಪುರ ಅಧ್ಯಕ್ಷ ರೋ. ದಿವಾಕರ್ ಪೂಜಾರಿ ಉಪಸಿತರಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಷನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಮಂಜುನಾಥ ಗಾಣಿಗ ನಿರೂಪಿಸಿದರು. ಮ್ಯಾರಾಥಾನ್ ನಲ್ಲಿ 348 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿಜೇತರಿಗೆ ಬಹುಮಾನ ವಿತರಣೆ
ಐದು ಕಿಲೋಮೀಟರ್ ಮ್ಯಾರಥಾನ್ ಪುರುಷ ವಿಭಾಗದಲ್ಲಿ ಎಂಜಿಎಂ ಕಾಲೇಜ್ನ ಪ್ರಯಾಗ ಸಿ ಶೆಟ್ಟಿ (ಪ್ರಥಮ), ಬೋರ್ಡ್ ಕಾಲೇಜ್ನ ಪ್ರಜ್ವಲ್ ಗೋಣಿ, (ದ್ವೀತಿಯ), ನಾಗರಾಜ ಸುರೇಶ ಅರಾವತ (ತೃತಿಯ), ಮಹಿಳೆಯರ ಐದು ಕಿಲೋ ಮೀಟರ್ ಮ್ಯಾರಥಾನ್ ವಿಭಾಗದಲ್ಲಿ ಎಂಜಿಎಂ ಕಾಲೇಜ್ನ ನಂದಿನಿ ಎನ್ ಎಸ್ . (ಪ್ರಥಮ), ನಿಟ್ಟೆ ಎನ್.ಎಸ್.ಎ.ಎಂ. ಕಾಲೇಜ್ನ ಪ್ರತಿಕ್ಷ (ದ್ವೀತಿಯ), ಡಾ ಜಿ ಶಂಕರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ನ ಚಂದ್ರಿಕಾ (ತೃತೀಯ) ಸ್ಥಾನ ಗಳಿಸಿದರು. ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.