ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಬೆಂಗಳೂರು ನಗರ ಜಿಲ್ಲೆಯ ಯುವಜನರಲ್ಲಿ ಶಾಸ್ತ್ರೀಯ ಕಲೆ, ಜಾನಪದ ಕಲೆ, ಸಂಗೀತ ಮತ್ತು ಸಂಸ್ಕೃತಿಯ ಬಗೆಗಿನ ಕಾಳಜಿ ಉತ್ತೇಜಿಸಲು ಮತ್ತು ಪ್ರೋತ್ಸಾಹಿಸಲು ಸೆ. 17 ರಂದು 2024-25ನೇ ಸಾಲಿನ ಯುವಜನೋತ್ಸವ ಕಾರ್ಯಕ್ರಮ ಆಯೋಜಿಸಿದೆ.
ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿನ ರಾಜ್ಯ ಯುವ ಕೇಂದ್ರದ ಯವನಿಕ ಸಭಾಂಗಣ ಉತ್ಸವ ನಡೆಯಲಿದ್ದು, 15 ರಿಂದ 29 ವರ್ಷಗಳ ವಯೋಮಾನದ ಯುವಜನರಿಗಾಗಿ ವಿಷಯಾಧಾರಿತ ಸ್ಪರ್ಧೆ ( ಜನಪದ ಗೀತೆ, ಜನಪದ ನೃತ್ಯ, ಕವಿತೆ ಬರೆಯುವುದು, ಕಥೆ ಬರೆಯುವುದು, ಚಿತ್ರಕಲೆ) ಗಳನ್ನು ಆಯೋಜಿಸಲಾಗಿದೆ.
ವೈಯಕ್ತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 3 ಸಾವಿರ, ದ್ವಿತೀಯ ಬಹುಮಾನ 2 ಸಾವಿರ. ಗುಂಪು ಸ್ಪರ್ಧೆಗಳಿಗೆ ಪ್ರಥಮ ಬಹುಮಾನ 15 ಸಾವಿರ ಹಾಗೂ ದ್ವಿತೀಯ ಬಹುಮಾನ 10 ಸಾವಿರ ರೂ. ನೀಡಲಾಗುವುದು. ಉಚಿತ ಪ್ರವೇಶವಿದ್ದು, ಆಸಕ್ತ ಯುವಜನರು ಪಾಲ್ಗೊಳ್ಳಬಹುದಾಗಿದೆ.
ಪ್ರವೇಶ ಪತ್ರ ಹಾಗೂ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಬೆಂಗಳೂರು ನಗರ ಜಿಲ್ಲೆ, ಕೊಠಡಿ ಸಂಖ್ಯೆ: 17, 18, ಶ್ರೀ ಕಂಠೀರವ ಕ್ರೀಡಾ ಸಂಕೀರ್ಣ, ಕಸ್ತೂರಬಾ ರಸ್ತೆ, ಬೆಂಗಳೂರು 560001 ಅಥವಾ ದೂರವಾಣಿ ಸಂಖ್ಯೆ- 08022239771 ಗೆ ಸಂಪರ್ಕಿಸಬಹುದು.