ಮಂಗಳೂರು: ಸಂಘಟನೆಯಿಂದ ಸಾಮಾಜಿಕ ಬಲವರ್ಧನೆ ಸಾಧ್ಯವಿದ್ದು, ಸಂಘಟನೆಯೊಂದು ಸಮಾಜಮುಖಿಯಾದ ತನ್ನ ಚಿಂತನೆಗಳಲ್ಲಿ ರಚನಾತ್ಮಕತೆಯನ್ನು ಅಳವಡಿಸಿಕೊಂಡಾಗ ಅದು ಸರ್ವಮಾನ್ಯತೆಯನ್ನು ಪಡೆದುಕೊಳ್ಳುತ್ತದೆ ಎಂದು ಯುವವಾಹಿನಿ ಕಂಕನಾಡಿ ಘಟಕದ ಘಟಕದ ಅಧ್ಯಕ್ಷ ಪೃಥ್ವಿರಾಜ್ ಎಂ ಹೇಳಿದರು.
ಕಂಕನಾಡಿ ಗರೋಡಿ ಬಳಿಯಲ್ಲಿರುವ ಸಮೃದ್ಧಿ ಭವನದಲ್ಲಿ ನಡೆದ ಯುವವಾಹಿನಿ ಕಂಕನಾಡಿ ಘಟಕದ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯುವವಾಹಿನಿಯು ತನ್ನ ಕ್ರಿಯಾಶೀಲ ಹೆಜ್ಜೆಗಳ ಮೂಲಕ ಪ್ರಸ್ತುತಗೊಳ್ಳುತ್ತಿದೆ. ಸಂಘಟನೆಯಿಂದ ಬಲಯುತ ಸಮಾಜ ನಿರ್ಮಾಣ ಸಾಧ್ಯವಿದ್ದು, ಜಗತ್ತಿನ ವೈಚಾರಿಕತೆಯ ಬೆಳಕು, ಸಾಮಾಜಿಕ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಾರ್ವಕಾಲಿಕ ಮೌಲ್ಯವುಳ್ಳದ್ದು ಎಂದರು.
ಉದ್ಯಮಿ ಎಂ. ಸದಾನಂದ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಘಟನೆಗಳ ಸಮಾಜಮುಖಿ ಕಾರ್ಯಗಳು ಸರ್ವರನ್ನೂ ಒಳಗೊಳ್ಳುವ ಒಲವು ಹೊಂದಿರಬೇಕು. ಈ ನಿಟ್ಟಿನಲ್ಲಿ ಯುವವಾಹಿನಿಯ ಕಾರ್ಯಯೋಜನೆಗಳು ನಾರಾಯಣ ಗುರುಗಳ ತತ್ವಾದರ್ಶಗಳಿಗೆ ಪೂರಕವಾಗಿವೆ ಎಂದರು.
ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ರಾಜೇಶ್ ಬಿ ಅವರು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಶ್ರೀ ಮಹಾಂಕಾಳಿ ಸೇವಾ ಸಮಿತಿ ಉಜ್ಜೋಡಿ ಇದರ ಅಧ್ಯಕ್ಷ ಉಮಾನಾಥ್ ಕೋಟ್ಯಾನ್, ಯುವವಾಹಿನಿ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಅಶೋಕ್ ಬಜ್ಪೆ ಉಪಸ್ಥಿತರಿದ್ದರು.
ಕಾರ್ಯದರ್ಶಿ ಸುರೇಖಾ ಮೋಹನ್ ವರದಿ ಮಂಡಿಸಿದರು. ಚುನಾವಣಾ ಅಧಿಕಾರಿ ನಯನ ಸುರೇಶ್ ಘಟಕದ ನೂತನ ಪದಾಧಿಕಾರಿಗಳನ್ನು ಘೋಷಣೆ ಮಾಡಿದರು. ಘಟಕದ ಸದಸ್ಯರಾದ ಮೇಘ ಹಾಗೂ ಸಾಕ್ಷಿ ಪ್ರಾರ್ಥಿಸಿದರು. ಪೃಥ್ವಿರಾಜ್ ಎಂ ಸ್ವಾಗತಿಸಿದರು. ರಚನಾ ಹಾಗೂ ಧನುಷ್ ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ಮಮತಾ ತೇಜ್ ಪಾಲ್ ವಂದಿಸಿದರು.