ಶಿವಮೊಗ್ಗ: ರಾಜ್ಯ ಸರ್ಕಾರದ ಗ್ಯಾರಂಟಿಗಳ ಪೈಕಿ ಒಂದಾಗಿರುವ ಯುವನಿಧಿಯಲ್ಲಿ ನಿಗದಿತ ಗುರಿಯ ಶೇ. 50ರಷ್ಟನ್ನೂ ಸಾಧಿಸದಿರುವ ಬಗ್ಗೆ ಪರಿಷತ್ ಕಲಾಪದಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ನಿರುದ್ಯೋಗ ಭತ್ಯೆಗೆ ನೋಂದಣಿ ಮಾಡಿಕೊಂಡಿರುವವರ ಸಂಖ್ಯೆ, ಯೋಜನೆಯಲ್ಲಿ ಈವರೆಗೂ ನೀಡಿರುವ ಭತ್ಯೆ, ಬಾಕಿ ಉಳಿದವರ ಅರ್ಜಿಗಳು ಎಷ್ಟು ಎಂದು ಪ್ರಶ್ನಿಸಿದರು. ಯೋಜನೆ ಜಾರಿಗೂ ಮುನ್ನ 5.5 ಲಕ್ಷ ಮಂದಿ ನಿರುದ್ಯೋಗಿಗಳಿಗೆ 450 ಕೋಟಿ ರೂ. ನಿರುದ್ಯೋಗ ಭತ್ಯೆ ಮಂಜೂರು ಮಾಡಲು ಸರ್ಕಾರ ಗುರಿ ನಿಗದಿ ಮಾಡಿಕೊಂಡಿತ್ತು. ಗುರಿ ತಲುಪದಿರಲು ಕಾರಣವೇನು ಎಂದು ಪ್ರಶ್ನಿಸಿದರು.
ಯೋಜನೆ ಬಗ್ಗೆ ಪಾರದರ್ಶಕ ಪ್ರಚಾರ ಇಲ್ಲ. ಅರ್ಜಿ ಸಲ್ಲಿಸುವುದು ಹೇಗೆ? ಎಲ್ಲಿಗೆ ಅರ್ಜಿ ಸಲ್ಲಿಸಬೇಕು ಎಂಬುದು ನಿರುದ್ಯೋಗಿಗಳಿಗೆ ತಿಳಿದಿಲ್ಲ. ಅರ್ಜಿಗಳನ್ನು ಯಾವುದೇ ಮಾಹಿತಿ ನೀಡದೆ ತಿರಸ್ಕರಿಸಲಾಗುತ್ತಿದೆ. ಅರ್ಜಿದಾರರಿಗೆ ನೆರವಾಗುವ ಸೂಕ್ತ ಸಹಾಯವಾಣಿಯೂ ಇಲ್ಲ ಎಂದರು.
ಯೋಜನೆಯ ಪ್ರಮುಖ ನ್ಯೂನತೆ ಎಂದರೆ ಗ್ರಾಮೀಣ ಪ್ರದೇಶದ ಅರ್ಹ ಫಲಾನುಭವಿಗಳಿಗೆ ಬೆಂಬಲ ನೀಡಲು ಸೌಲಭ್ಯಗಳ ಕೊರತೆಯಿದೆ. ಕುವೆಂಪು ವಿವಿಯಲ್ಲಿ ಎರಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಮಾರ್ಕ್ಸ್ ಕಾರ್ಡ್ ನೀಡಿಲ್ಲ. ಅವರು ಯುವನಿಧಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.