ಕಾರವಾರ: ಸರ್ಕಾರದ ಗ್ಯಾರಂಟಿ ಯೋಜನೆಯಾದ ಯುವ ನಿಧಿ ಯೋಜನೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳನ್ನು ನೊಂದಣಿ ಮಾಡಿ, ಯೋಜನೆಯ ಸೌಲಭ್ಯವನ್ನು ಒದಗಿಸುವಂತೆ ಜಿಲ್ಲೆಯ ಎಲ್ಲ ತಹಸೀಲ್ದಾರ್ ಗಳು ಮತ್ತು ತಾಪಂ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚನೆ ನೀಡಿದರು.
ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ , ಯುವನಿಧಿ ಯೋಜನೆಯ ನೊಂದಣಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ 2022-23 ರಲ್ಲಿ ಪದವಿ, ಡಿಪ್ಲಮೋ ಪಡೆದ ವಿದ್ಯಾರ್ಥಿಗಳು ಯುವ ನಿಧಿ ಯೋಜನೆಯಲ್ಲಿ ನೊಂದಾಯಿಸಿಕೊಳ್ಳಲು ಅರ್ಹರಾಗಿದ್ದು, ಪದವೀಧರರಿಗೆ 3000 ರೂ. ಹಾಗೂ ಡಿಪ್ಲಮೋ ತೇರ್ಗಡೆಯಾದವರಿಗೆ 1500 ರೂ ಗಳ ನಿರುದ್ಯೋಗ ಭತ್ಯೆಯನ್ನು 2 ವರ್ಷಗಳ ವರೆಗೆ ನೀಡುವ ಯುವನಿಧಿ ಯೋಜನೆಯ ಕುರಿತಂತೆ ಜಿಲ್ಲೆಯ ಎಲ್ಲ ನಗರಸ್ಥಳೀಯ ಸಂಸ್ಥೆಗಳು, ತಾಲೂಕುಗಳು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೆಚ್ಚಿನ ಅರಿವು ಮೂಡಿಸುವುದರ ಜೊತೆಗೆ ಜಿಲ್ಲೆಯ ಗರಿಷ್ಠ ಸಂಖ್ಯೆಯ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯವನ್ನು ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.
ಜಿಲ್ಲೆಯಲ್ಲಿ 32 ಪದವಿ ಕಾಲೇಜ್ ಹಾಗೂ 8 ಡಿಪ್ಲೊಮಾ ಕಾಲೇಜ್, ಗಳಿವೆ.. ಈ ಸಂಸ್ಥೆಗಳಲ್ಲಿ 2022-23 ರಲ್ಲಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳು ವಿವರ ಮತ್ತು ಮೊಬೈಲ್ ಸಂಖ್ಯೆಯನ್ನು ಸಂಗ್ರಹಿಸಿ ಪ್ರತಿಯೊಬ್ಬರಿಗೂ ದೂರವಾಣಿ ಮೂಲಕ ಸಂಪರ್ಕಿಸಿ , ಯೋಜನೆಯ ಬಗ್ಗೆ ಮಾಹಿತಿ ನೀಡಿ ನೊಂದಣಿ ಮಾಡುವಂತೆ ಹಾಗೂ ಎಲ್ಲ ಗ್ರಾಮ ಪಂಚಾಯಿತಿಗಳು, ತಹಸೀಲ್ದಾರ್ ಕಚೇರಿಗಳ ವ್ಯಾಪ್ತಿಯಲ್ಲಿ ಯೋಜನೆಯ ಕುರಿತಂತೆ ಪ್ರಚಾರ ಫಲಕಗಳನ್ನು ಅಳವಡಿಸುವುದರ ಜೊತೆಗೆ, ಸೋಷಿಯಲ್ ಮೀಡಿಯಗಳ ಮೂಲಕ ಸಹ ಹೆಚ್ಚಿನ ಪ್ರಚಾರ ಕೈಗೊಳ್ಳುವಂತೆ ತಿಳಿಸಿದರು.
ಜನವರಿ 12 ಕ್ಕೆ ಯುವನಿಧಿ ಯೋಜನೆಯು ಮುಖ್ಯಂತ್ರಿಗಳಿ0ದ ಉದ್ಘಾಟನೆಯಾಗಲಿದ್ದು, ಅಂದು ರಾಜ್ಯದಲ್ಲಿ ನೊಂದಣಿ ಮಾಡಿರುವ ಎಲ್ಲಾ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಲಿದ್ದು , ಜಿಲ್ಲೆಯಲ್ಲಿ ಇದುವರೆಗೆ 752 ಮಂದಿ ಮಾತ್ರ ಯೋಜನೆಗೆ ನೊಂದಣಿ ಮಾಡಿದ್ದು, ಜಿಲ್ಲೆಯ ಅರ್ಹ ಎಲ್ಲಾ ಫಲಾನುಭವಿಗಳಿಗೂ ಈ ಯೋಜನೆಯ ಪ್ರಯೋಜನ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸುವಂತೆ ಹೇಳಿದರು.
ಈ ಯೋಜನೆಗೆ ಅಭ್ಯರ್ಥಿಗಳು ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಪದವಿ/ಡಿಪ್ಲಮೋ ಪಡೆದವರು, ಕನಿಷ್ಠ 6 ವರ್ಷ ರಾಜ್ಯದ ನಿವಾಸಿಗಳಾಗಿರುವವರು ಮಾತ್ರ ಅರ್ಹರಿದ್ದು, ಎಸ್.ಎಸ್.ಎಲ್.ಸಿ., ಪಿಯುಸಿ ಮತ್ತು ಪದವಿ, ಡಿಪ್ಲೊಮಾ ಉತ್ತೀರ್ಣದ ಪ್ರಮಾಣಪತ್ರಗಳನ್ನು ಸಲ್ಲಿಸಬೇಕಾಗಿದ್ದು, ಯೋಜನೆಯ ನೊಂದಣಿಗೆ ಯಾವುದೇ ಶುಲ್ಕವಿರುವುದಿಲ್ಲ ಎಂದರು.
ಜಿಲ್ಲೆಯ ಎಲ್ಲ ಕಾಲೇಜುಗಳ ಪ್ರಾಂಶುಪಾಲರು ತಮ್ಮ ಸಂಸ್ಥೆಯಲ್ಲಿ 2022-23 ರಲ್ಲಿ ಪದವಿ,ಡಿಪ್ಲಮೋ ಪಡೆದ ವಿದ್ಯಾರ್ಥಿಗಳಿಗೆ ಯೋಜನೆಯ ಬಗ್ಗೆ ಮಾಹಿತಿ ನೀಡುವ ಮೂಲಕ ಜಿಲ್ಲೆಯ ಹೆಚ್ಚಿನ ಸಂಖ್ಯೆಯ ಯುವಜನತೆಗೆ ಇದರ ಪ್ರಯೋಜನ ಪಡೆಯುವಂತೆ ನೋಡಿಕೊಳ್ಳಬೇಕು ಹಾಗೂ ವಿದ್ಯಾರ್ಥಿಗಳ ಮಾಹಿತಿಯನ್ನು ಸಂಬ0ದಪಟ್ಟ ಅಧಿಕಾರಿಗಳಿಗೆ ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿಗಲು, ಜಿಲ್ಲೆಯ ಅರ್ಹ ಎಲ್ಲಾ ಪದವಿ, ಡಿಪ್ಲೊಮಾ ಪದವೀಧರರು ಸರ್ಕಾರದ ಯೋಜನೆಯ ನೆರವು ಪಡೆಯುವಂತೆ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ, ಜಿ.ಪಂ. ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಜಿಲ್ಲಾ ಉದ್ಯೋಗಾಧಿಕಾರಿ ವಿನೋದ್ ನಾಯ್ಕ್, ಜಿಲ್ಲಾ ಕೌಶಲ್ಯಾಭಿವೃಧ್ದಿ ಅಧಿಕಾರಿ ಡಿ.ಟಿ,ನಾಯ್ಕ್ , ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಜಯಂತ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.