ಜಿಲ್ಲೆ

ವಿದ್ಯುತ್ ಬೇಡಿಕೆಯಲ್ಲಿ ಇಳಿಕೆ, ಶಾಖೋತ್ಪನ್ನ ಕೇಂದ್ರಗಳಿಗೆ ರೆಸ್ಟ್

Raichur

ಶಿವಮೂರ್ತಿ ಹಿರೇಮಠ ರಾಯಚೂರು

ಲಾಕ್‌ಡೌನ್‌ನಿಂದಾಗಿ ಕೈಗಾರಿಕೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸದೆ ಇರುವುದು ಹಾಗೂ ರಾಜ್ಯಾದ್ಯಂತ ಉತ್ತಮ ಮಳೆ ಆಗಿರುವುದರಿಂದ ರಾಜ್ಯದ ವಿದ್ಯುತ್ ಬೇಡಿಕೆ ಗಣನೀಯ ಪ್ರಮಾಣ ಇಳಿಕೆಯುಂಟಾಗಿದ್ದು, ಶಾಖೋತ್ಪನ್ನ ಕೇಂದ್ರದ ಘಟಕಗಳಿಗೆ ವಿಶ್ರಾಂತಿ ನೀಡಲಾಗಿದೆ.

ರಾಯಚೂರು ಬೃಹತ್ ಶಾಖೋತ್ಪನ್ನ ಕೇಂದ್ರದ ಎಲ್ಲ ಎಂಟು ಹಾಗೂ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಮೂರು ಘಟಕಗಳಲ್ಲಿ ಉತ್ಪಾದನೆ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿನ ಎರಡು ಘಟಕಗಳ ಪೈಕಿ ಒಂದರಲ್ಲಿ ಮಾತ್ರ ವಿದ್ಯುತ್ ಉತ್ಪಾದನೆ ನಡೆಯುತ್ತಿದೆ.

ಪ್ರಸ್ತುತ ರಾಜ್ಯದ ವಿದ್ಯುತ್ ಬೇಡಿಕೆ ಗರಿಷ್ಠ 8,597 ರಿಂದ ಕನಿಷ್ಠ 5,900 ಮೆಗಾವಾಟ್‌ವರೆಗೆ ಇದೆ. ಜಲಮೂಲದಿಂದ ರಾಜ್ಯಜಾಲಕ್ಕೆ 600 ಮೆವಾವರೆಗೆ ವಿದ್ಯುತ್ ಲಭ್ಯವಾಗುತ್ತಿದೆ. ಸೌರ-ಪವನ ಮೂಲದಿಂದ ಐದು ಸಾವಿರ ಮೆವಾಗೂ ಹೆಚ್ಚು ವಿದ್ಯುತ್ ಉತ್ಪಾದನೆ ಆಗುತ್ತಿದೆ. ಕೇಂದ್ರ ಜಾಲದಿಂದ 1,600 ಮೆವಾವರೆಗೆ ಲಭ್ಯವಾಗುತ್ತಿದೆ. ಹೀಗಾಗಿ ಶಾಖೋತ್ಪನ್ನ ಕೇಂದ್ರಗಳ ಘಟಕಗಳನ್ನು ಕಳೆದ ಐದಾರು ದಿನಗಳಿಂದ ಹಂತಹಂತವಾಗಿ ಸ್ಥಗಿತಗೊಳಿಸುತ್ತಾ ಬರಲಾಗಿದೆ. ಲಾಕ್‌ಡೌನ್ ಸಂದರ್ಭ ಕೈಗಾರಿಕೆಗಳಲ್ಲಿ ಕಾರ್ಯ ಚಟುವಟಿಕೆ ನಡೆಸಲು ಅನುಮತಿಯೇನೋ ಇದೆ. ಆದರೆ, ಇಲ್ಲೆಲ್ಲ ಪೂರ್ಣ ಪ್ರಮಾಣದಲ್ಲಿ ಚಟುವಟಿಕೆ ನಡೆಯದೆ ಇರುವುದಿಂದ ವಿದ್ಯುತ್ ಬೇಡಿಕೆಯಲ್ಲಿ ಇಳಿಮುಖವಾಗಿದೆ.

ಜತೆಗೆ ಸೌರ, ಪವನ ಮೂಲದಲ್ಲೂ ಉತ್ಪಾದನೆ ಹೆಚ್ಚಳವಾಗಿದೆ. ಬೇಡಿಕೆ ಮತ್ತು ಉತ್ಪಾದನೆ ಸರಿದೂಗಿಸುವ ನಿಟ್ಟಿನಲ್ಲಿ ಶಾಖೋತ್ಪನ್ನ ಕೇಂದ್ರದ ಘಟಕಗಳಿಗೆ ರೆಸ್ಟ್ ನೀಡುವ ಮೂಲಕ ಘಟಕಗಳ ನಿರ್ವಹಣೆ, ದುರಸ್ತಿ ಕಾರ್ಯಗಳನ್ನು ನಡೆಸುವಂತೆ ಕೇಂದ್ರಗಳ ಮುಖ್ಯಸ್ಥರಿಗೆ ಕೆಪಿಸಿ ಆಡಳಿತ ಮಂಡಳಿ ಸೂಚಿಸಿದೆ.