ಜಿಲ್ಲೆ

ಯೂಟ್ಯೂಬರ್ ಖ್ವಾಜಾ ವಿವಾಹ ಅಸಿಂಧುಗೊಳಿಸಿ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಯೂಟ್ಯೂಬರ್ ಖ್ವಾಜಾ ಶಿರಹಟ್ಟಿ (ಮುಕಳೆಪ್ಪ) ನಕಲಿ ದಾಖಲೆ ಸೃಷ್ಟಿಸಿ ಗಾಯತ್ರಿಯೊಂದಿಗೆ ವಿವಾಹ ನೋಂದಣಿ ಮಾಡಿಸಿಕೊಂಡಿದ್ದು, ತಕ್ಷಣ ಅವರ ವಿವಾಹವನ್ನು ಅಸಿಂಧುಗೊಳಿಸಬೇಕು. ಇಲ್ಲದಿದ್ದರೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಶ್ರೀರಾಮಸೇನೆ ಎಚ್ಚರಿಕೆ ನೀಡಿದೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀರಾಮ ಸೇನೆ ಹುಬ್ಬಳ್ಳಿ ನಗರ ಘಟಕದ ಅಧ್ಯಕ್ಷ ಬಸವರಾಜ ಗೌಡರ, ನಕಲಿ ದಾಖಲೆ ಸೃಷ್ಟಿಸುವ ಜತೆಗೆ ಹಿಂದು ಯುವತಿಯ ತಲೆ ಕೆಡಿಸಿರುವ ಖ್ವಾಜಾ ಶಿರಹಟ್ಟಿ ಲವ್ ಜಿಹಾದ್ ಮೂಲಕ ವಂಚನೆ ಮಾಡಿದ್ದಾನೆ. ಹೀಗಾಗಿ, ಪೊಲೀಸರು ಆತನನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು.

ಮುಂಡಗೋಡದ ಟ್ರಿನಿಟಿ ಹಾಲ್​ನಲ್ಲಿ ಏಪ್ರಿಲ್ 28ರಂದು ಗಾಯತ್ರಿಯೊಂದಿಗೆ ವಿವಾಹವಾಗಿರುವುದಾಗಿ ದಾಖಲೆಯಲ್ಲಿ ಉಲ್ಲೇಖಿಸಿದ್ದಾನೆ. ಆದರೆ, ಆ ದಿನ ಟ್ರಿನಿಟಿ ಹಾಲ್​ನಲ್ಲಿ ಈತನ ವಿವಾಹ ನಡೆದೇ ಇಲ್ಲ ಎಂದು ಹೇಳಿದರು.

ಖ್ವಾಜಾ ಮುಂಡಗೋಡ ನಿವಾಸಿ ಅಲ್ಲದಿದ್ದರೂ ಅಲ್ಲಿನ ನಿವಾಸಿ ಎಂದು ನಕಲಿ ದಾಖಲೆ ಸೃಷ್ಟಿಸಿ ಉಪ ನೋಂದಣಾಧಿಕಾರಿಗೆ ಸಲ್ಲಿಸಿದ್ದಾರೆ. ನೋಂದಣಿಯಲ್ಲಿ ಹಾಕಿದ್ದ ಸಾಕ್ಷಿದಾರರ ಸಹಿಗೂ, ನೋಟಿಸ್​ನಲ್ಲಿ ಇರುವ ಸಾಕ್ಷಿದಾರರ ಸಹಿಗೂ ವ್ಯತ್ಯಾಸವಿದೆ ಎಂದು ಹೇಳಿದರು.

ನೋಂದಣಿಗೆ ನೀಡಿದ ದಾಖಲೆಗಳನ್ನು ಪರಿಶೀಲಿಸದೆ, ಉಪನೋಂದಣಿ ಕಚೇರಿಯಲ್ಲಿ ನೋಂದಣಿ ವಿವಾಹ ಮಾಡಿದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ತಕ್ಷಣ ವಜಾಗೊಳಿಸಬೇಕು. ಸಾಕ್ಷಿದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗಾಯತ್ರಿ ತಾಯಿ ಶಿವಕ್ಕ, ನಮಗೆ ಹಾಗೂ ಮಗಳಿಗೆ ಖ್ವಾಜಾ ಮೋಸ ಮಾಡಿದ್ದಾನೆ. ನಮಗೆ ಮಗಳು ಬೇಕು ಎಂದು ಮನವಿ ಮಾಡಿದರು.

ಶ್ರೀರಾಮ ಸೇನೆಯ ಮಂಜುನಾಥ ಕಾಟ್ಕರ, ವೀರಯ್ಯ ಸಾಲಿಮಠ, ಮಹಾಲಿಂಗ ಐಗಳಿ, ಮಹಾಂತೇಶ ಟೊಂಗಳಿ ಸುದ್ದಿಗೋಷ್ಠಿಯಲ್ಲಿ ಇದ್ದರು.