ಜಿಲ್ಲೆ

ಗ್ರಾಮೀಣ ಕ್ರೀಡೆಗಳಿಂದ ಯುವ ಸಮುದಾಯ ವಿಮುಖ

ಲಲಾಟಾಕ್ಷ ಎಸ್

ಅರಸೀಕೆರೆ: ಗ್ರಾಮೀಣ ಕ್ರೀಡೆಗಳಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಜತೆಗೆ ಮನೋಲ್ಲಾಸ ಪಡೆಯಬಹುದಾಗಿದೆ ಎಂದು ಶಾಸಕ ಹಾಗೂ ರಾಜ್ಯ ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಹೇಳಿದರು.


ಹಳ್ಳಿಕಾರ್ ಗೋತಳಿ ಸಂಘದ ವತಿಯಿಂದ ತಾಲೂಕಿನ ಬಾಣಾವರ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಜೋಡೆತ್ತಿನ ಗಾಡಿ ಓಟದ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಕ್ರೀಡೆಗಳ ಭರಾಟೆಯಲ್ಲಿ ಗ್ರಾಮೀಣ ಆಟೋಟಗಳು ಮರೆಯಾಗುತ್ತಿವೆ. ವಿರಾಮ ವೇಳೆಯಲ್ಲಿ ಮನರಂಜನೆ ಪಡೆಯಲು ಹಳ್ಳಿಯ ಜನರು ವಿವಿಧ ಕ್ರೀಡೆಗಳನ್ನು ಆಯೋಜಿಸುತ್ತಿದ್ದರು. ತಂತ್ರಜ್ಞಾನದ ಕಾರಣದಿಂದಾಗಿ ಯುವ ಸಮುದಾಯ ದೈಹಿಕ ಹಾಗೂ ಮಾನಸಿಕ ಸದೃಢತೆಯ ಚಟುವಟಿಕೆಗಳಿಂದ ವಿಮುಖವಾಗುತ್ತಿದೆ. ಇದರ ನಡುವೆಯೂ ಗ್ರಾಮೀಣ ಪ್ರದೇಶದಲ್ಲಿ ಜೋಡಿತ್ತಿನ ಗಾಡಿ ಓಟದ ಸ್ಪರ್ಧೆ ಆಯೋಜಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.


ಕಾಂಗ್ರೆಸ್ ಮುಖಂಡ ಶ್ರೇಯಸ್ ಪಟೇಲ್ ಮಾತನಾಡಿ, ಸ್ಪರ್ಧೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ ಎಂಬದನ್ನು ಮನಗಂಡು ಕ್ರೀಡಾ ಸ್ಫೂರ್ತಿ ಪ್ರದರ್ಶಿಸಬೇಕು. ಆಗ ಮಾತ್ರ ಇಂತಹ ಚಟುವಟಿಕಗಳಿಗೆ ಅರ್ಥ ಬರಲಿದೆ ಎಂದರು.


ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ, ತಾಪಂ ಮಾಜಿ ಸದಸ್ಯ ರವಿಶಂಕರ್, ಗ್ರಾಪಂ ಸದಸ್ಯ ಆಸೀಫ್, ಜಯಣ್ಣ ಪಾಲ್ಗೊಂಡಿದ್ದರು. ರಾಜ್ಯದ ವಿವಿಧೆಡೆಗಳಿಂದ ಐವತ್ತಕ್ಕೂ ಹೆಚ್ಚು ಸ್ಪರ್ಧಿಗಳು ಆಗಮಿಸಿದ್ದರು.