ಹನೂರು: ಬದುಕಿನಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ಸಿಗಬೇಕಾದರೆ ಹಾಗೂ ಉತ್ತಮ ಜೀವನ ರೂಪಿಸಿಕೊಳ್ಳಬೇಕಾದರೆ ದುಶ್ಚಟಗಳಿಂದ ದೂರವಿರಬೇಕು ಎಂದು ಸುತ್ತೂರು ವೀರ ಸಿಂಹಾಸನ ಮಠದ ಪೀಠಾಧಿಪತಿ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ತಿಳಿಸಿದರು.
ಪಟ್ಟಣದ ವಾಸವಿ ಮಹಲ್ ಕಲ್ಯಾಣ ಮಂಟಪದಲ್ಲಿ ಸೋಮವಾರ ಸುತ್ತೂರು ವೀರಸಿಂಹಾಸನ ಮಠ, ಜೆಎಸ್‌ಎಸ್ ಮಹಾ ವಿದ್ಯಾಪೀಠ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಕುಡಿತ ಬಿಡಿಸುವ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಯಾವುದೋ ಒಂದು ಕಾರಣದಿಂದ ಕೆಲವರು ಕುಡಿತದ ಚಟಕ್ಕೆ ಒಳಗಾಗುತ್ತಾರೆ. ವಾಸ್ತವ ಪ್ರಪಂಚವನ್ನೇ ಮರೆತಿರುತ್ತಾರೆ. ಇದರಿಂದ ಆರೋಗ್ಯ ಹದಗೆಡುವುದರ ಜತೆಗೆ ಕುಟುಂಬ ಹಾಗೂ ಮಕ್ಕಳ ಮೇಲೆ ದುಷ್ಪ್ಪರಿಣಾಮ ಬೀರುತ್ತದೆ. ಸಮಾಜದ ಸ್ವಾಸ್ಥೃ ಹಾಳಾಗುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶದಲ್ಲಿ ಯುವ ಪೀಳಿಗೆ ಡ್ರಗ್ಸ್ ಚಟಕ್ಕೆ ಒಳಗಾಗುತ್ತಿದ್ದು, ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಮದ್ಯಪಾನ ದೇಹದ ಅನೇಕ ಭಾಗಗಳನ್ನು ಸುಡುವುದು ಎಷ್ಟು ಕೆಟ್ಟದ್ದೊ, ಧೂಮಪಾನ ಹಾಗೂ ಮಾದಕ ವಸ್ತುಗಳ ಸೇವನೆಯೂ ಸಹ ಅಷ್ಟೇ ಕೆಟ್ಟದ್ದು. ದುಶ್ಚಟಗಳಿಗೆ ಒಳಗಾದವರು ಇದರಿಂದ ಸುಲಭವಾಗಿ ಹೊರ ಬರವುದು ಕಷ್ಟ. ಆದರೆ ಮನಸ್ಸು ಮಾಡಬೇಕಷ್ಟೆ. ಈ ದಿಸೆಯಲ್ಲಿ ಶಿಬಿರ ಆಯೋಜಿಸಲಾಗಿದ್ದು ಶಿಬಿರಾರ್ಥಿಗಳಿಗೆ ವೈದ್ಯರಿಂದ ತಪಾಸಣೆ ನಡೆಸಲಾಗಿದೆ. ಆಪ್ತ ಸಮಾಲೋಚನೆ ಮಾಡಲಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಕುಡಿತದಿಂದ ದೂರವಿರಲು ಮುಕ್ತ ಮನಸ್ಸಿನಿಂದ ದೃಢ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.
ದುರದೃಷ್ಟಕರ:
ಮದ್ಯ ನಿಷೇಧಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಆದರೆ, ಉತ್ತಮ ಆದಾಯ ಬರುತ್ತಿರುವುದರಿಂದ ಈ ಬಗ್ಗೆ ಕ್ರಮವಹಿಸುತ್ತಿಲ್ಲ. ಕೋವಿಡ್ ವೇಳೆ ಮದ್ಯ ಮಾರಾಟ ಸ್ಥಗಿತಗೊಂಡಿತ್ತು. ಮರು ಆರಂಭವಾದ ಬಳಿಕ ವ್ಯಸನಿಗಳು ಸರತಿ ಸಾಲಿನಲ್ಲಿ ನಿಂತುಕೊಂಡು ಮದ್ಯ ಖರೀದಿಸುತ್ತಿದ್ದ ಸನ್ನಿವೇಶಗಳು ನಿಜಕ್ಕೂ ದುರದೃಷ್ಟಕರ ಸಂಗತಿ. ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಕುಡಿತದ ಅಭ್ಯಾಸ ರೂಢಿಸಿಕೊಂಡಿರುವುದು ಉತ್ತಮ ಸಮಾಜಕ್ಕೆ ಮಾರಕವಾಗಿದೆ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು.
ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಜಗದ್ಗುರು ಶ್ರೀ ರಾಜೇಂದ್ರ ಸ್ವಾಮೀಜಿ ಅವರ ದೂರದೃಷ್ಟಿಯ ಫಲದಿಂದಾಗಿ ಸುತ್ತೂರು ಮಠವು ಹಿಮಾಲಯದಂತೆ ಉತ್ತುಂಗ ಸ್ಥಾನದಲ್ಲಿದೆ. ಮಠವು ಸದೃಢ ಸಮಾಜವನ್ನು ನಿರ್ಮಿಸುವುದರ ಮೂಲಕ ಜನರ ಬದುಕು ಹಸನುಗೊಳಿಸಿಲು 2014ರಿಂದ ಕುಡಿತ ಬಿಡಿಸುವ ಶಿಬಿರ ಆಯೋಜಿಸುತ್ತಿದ್ದು ಸಾವಿರಾರು ವ್ಯಸನಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಹಾಗಾಗಿ ಮಠದ ಸೇವಾ ಕಾರ್ಯ ಶ್ಲಾಘನೀಯ. ಹನೂರಿನಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ಭಾಗಿಯಾಗಿರುವ 54 ಶಿಬಿರಾರ್ಥಿಗಳು ಧಾರ್ಮಿಕ ಸೇವೆಯಲ್ಲಿ ಹೆಚ್ಚು ಪಾಲ್ಗೊಳ್ಳಬೇಕು. ಇತರರಿಗೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.
ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ಸುತ್ತೂರು ಮಠವು ಕುಡಿತ ಬಿಡಿಸುವ ಶಿಬಿರ ಆಯೋಜಿಸುತ್ತಿರುವುದು ಶ್ಲಾಘನೀಯ. ಕೆಲವರು ಸಂಜೆಯಾಗುತ್ತಿದ್ದಂತೆ ಕುಡಿತದ ಅಭ್ಯಾಸಕ್ಕೆ ಒಳಗಾಗಿ ಕಷ್ಟದ ಪರಿಸ್ಥಿತಿಗೆ ಸಿಲುಕಿ ಹಾಕೊಳ್ಳುತ್ತಿದ್ದಾರೆ. ಹನೂರು ಭಾಗದ ಹಳ್ಳಿಗಳಲ್ಲಿರುವ ಚಿಲ್ಲರೆ ಅಂಗಡಿಗಳಲ್ಲಿ ಮದ್ಯ ಮಾರಾಟ ಅಕ್ರಮವಾಗಿ ಎಗ್ಗಿಲ್ಲದೆ ನಡೆಯುತ್ತಿದೆ. ಇದರಿಂದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿವೆ. ಈ ರೀತಿ ಪರಿಸ್ಥಿತಿ ಬದಲಾಯಿಸುವಲ್ಲಿ ಇಂತಹ ಶಿಬಿರಗಳು ಹೆಚ್ಚಾಗಬೇಕು. ಸರ್ಕಾರಕ್ಕೆ ಉತ್ತಮ ಆದಾಯ ಬರುತ್ತಿರುವ ಕಾರಣಕ್ಕೆ ಹೆಚ್ಚು ಮದ್ಯದಂಗಡಿಗಳನ್ನು ತೆರೆಯಲಾಗುತ್ತಿದೆ. ಆದರೆ, ಜನರ ಆರೋಗ್ಯಕ್ಕೆ ಎಷ್ಟು ಅನುದಾನ ಮೀಸಲಿಡಬೇಕು ಎಂಬುದರ ಬಗ್ಗೆ ಗಮನಹರಿಸುತ್ತಿಲ್ಲ. ಮದ್ಯ ಮಾರಾಟದಿಂದ ಅನಾಹುತವಾಗುತ್ತಿದೆಯೇ ವಿನಃ ಲಾಭವಾಗುತ್ತಿಲ್ಲ. ಆದ್ದರಿಂದ ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು ಎಂದು ಹೇಳಿದರು.
ಕೆಲವರು ಕುಡಿತದ ಚಟಕ್ಕೆ ಒಳಗಾಗಿ ಸುಂದರ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಮನಸ್ಸು ಹತೋಟಿಯಲ್ಲಿದ್ದರೆ ದುಶ್ಚಟಗಳಿಂದ ದೂರವಿರಬಹುದು. ಆದ್ದರಿಂದ, ಶಿಬಿರಾರ್ಥಿಗಳು ಇನ್ನು ಮುಂದೆ ಕುಡಿತಕ್ಕೆ ಒಳಗಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು. ಉತ್ತಮ ಬದುಕು ರೂಪಿಸಿಕೊಂಡು ಇತರರಿಗೆ ಮಾದರಿಯಾಗಿರಬೇಕು ಎಂದು ಆಶಿಸಿದರು.
ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು ಮಾತನಾಡಿ, ಸುತ್ತೂರು ಮಠವು ಸಾಮಾಜಿಕ ಬದ್ಧತೆಯಿಂದ ಜನರಿಗೆ ಸೇವೆ ನೀಡುತ್ತಿರುವುದು ಮೆಚ್ಚುಗೆಯ ಸಂಗತಿ. ಪೂರ್ವಜರ ಜೀವನ ಶೈಲಿ ಅವಲೋಕಿಸಿದಾಗ ಶಿವಪೂಜೆ ಮಾಡುತ್ತಿದ್ದರು. ರಾಮಾಯಣ, ಮಹಾಭಾರತ ಓದುತ್ತಿದ್ದರು, ವೇದಗಳ ಕಡೆ ಗಮನಹರಿಸುತ್ತಿದ್ದರು. ಇದರಿಂದ ಜೀವನವು ಮೌಲ್ಯಯುತವಾಗಿತ್ತು. ಇಂದಿನ ಪೀಳಿಗೆ ಎಲ್ಲದಕ್ಕೂ ಮದ್ಯ ಸೇವನೆ ಅಭ್ಯಾಸ ರೂಢಿಸಿಕೊಂಡಿರುವುದು ನಿಜಕ್ಕೂ ವಿಪರ್ಯಾಸ ಎಂದರು.
ಶಿಬಿರಾರ್ಥಿಗಳು, ಕುಟುಂಬಸ್ಥರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಮಾಜಿ ಶಾಸಕಿ ಪರಿಮಳ ನಾಗಪ್ಪ, ಕೊಳ್ಳೇಗಾಲ ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ದತ್ತೇಶ್‌ಕುಮಾರ್, ಪಪಂ ಅಧ್ಯಕ್ಷೆ ಮಮ್ತಾಜ್ ಬಾನು, ಬಿಜೆಪಿ ಮುಖಂಡ ನಿಶಾಂತ್, ಶಿಬಿರದ ಸಂಯೋಜಕ ಸೋಮಶೇಖರ್, ಡಾ.ಮಂಜುನಾಥ್ ಇತರರಿದ್ದರು.