ಕಿಕ್ಕೇರಿ: ಮಾದಕ ವಸ್ತುಗಳು ಸಾಮಾಜದ ಸ್ವಾಸ್ಥ್ಯ ಹಾಳು ಮಾಡುವುದರೊಂದಿಗೆ ಬದುಕನ್ನು ಸರ್ವನಾಶ ಮಾಡಲಿದೆ ಎಂದು ಕಿಕ್ಕೇರಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ರೇವತಿ ತಿಳಿಸಿದರು.
ಕೆಪಿಎಸ್ ಶಾಲೆಯ ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಬುಧವಾರ ಎನ್‌ಎಸ್‌ಎಸ್ ಘಟಕ, ಕಿಕ್ಕೇರಿ ಪೊಲೀಸ್ ಠಾಣೆ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಣೆ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಾದಕ ವಸ್ತುಗಳನ್ನು ಶೇಖರಣೆ, ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ. ಯುವ ಪೀಳಿಗೆಯನ್ನು ಬಹುತೇಕ ಈ ಪಿಡುಗು ದೊಡ್ಡ ವ್ಯಸನಿಗಳಾಗಿ ಮಾಡಿ ಭವಿಷ್ಯವನ್ನು ಹಾಳು ಮಾಡುತ್ತಿದೆ. ಕ್ಷಣಿಕ ನೋವು, ಮೋಜು, ಖುಷಿಗಾಗಿ ಸೇವಿಸಿ ಜೀವ ಹಾಳು ಮಾಡುವ ಇಂತಹ ವಸ್ತುಗಳಿಂದ ದೂರವಿರಿ ಎಂದು ಸಲಹೆ ನೀಡಿದರು.
ಮಾದಕ ವಸ್ತುಗಳ ಮಾರಾಟ ದಂಧೆ ಮಾಹಿತಿ ಇದ್ದಲ್ಲಿ ತಿಳಿಸಿ. ಅಫೀಮು, ಗಾಂಜಾ, ಚರಸ್, ಹೆರಾಯಿನ್, ಎಲ್‌ಎಸ್‌ಡಿಯಂತಹ ಅಪಾಯಕರ ವಸ್ತುಗಳ ಸೇವನೆ ಸಾವಿಗೆ ದೂಡಲಿದೆ. ಇವುಗಳ ಮಾರಾಟ ದಂಧೆಗೆ ಬಹುತೇಕ ಅಮಾಯಕರು ಬಲಿಯಾಗುವಂತಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರಬೇಕು. ಮಾದಕ ವಸ್ತು ಸೇವನೆ ಕ್ಷಣಿಕವಾಗಿ ಆನಂದ ನೀಡಿದರೂ ಮೆದುಳಿನ ಮೇಲೆ ಗಂಭೀರ ಪರಿಣಾಮ ಬೀರಿ ಸಾವಿಗೆ ದೂಡಲಿದೆ ಎಂದರು.
ಪ್ರಾಂಶುಪಾಲ ದೊರೆಸ್ವಾಮಿ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳು ಆರಂಭದಲ್ಲಿ ಖುಷಿಗಾಗಿ ಮಾದಕ ವಸ್ತುಗಳನ್ನು ಸೇವಿಸಿ ವ್ಯಸನಿಗಳಾಗುತ್ತಿದ್ದಾರೆ. ಇದನ್ನು ಬಿಟ್ಟು ಬದುಕಲಾರದ ಸ್ಥಿತಿಗೆ ತಲುಪಿ ಕಾಲೇಜಿಗೆ ಗೈರು, ಚಡಪಡಿಕೆ, ಕೊಲೆ, ಸುಲಿಗೆಯಂತಹ ಹತ್ತಾರು ವಿದ್ವಂಸಕ ಕೃತ್ಯಕ್ಕೆ ತಲುಪುತ್ತಿರುವುದನ್ನು ಕಾಣುಬಹುದಾಗಿದೆ ಎಂದು ಹೇಳಿದರು.
ಇದೇ ವೇಳೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಎನ್‌ಎಸ್‌ಎಸ್ ಘಟಕಾಧಿಕಾರಿ ಕುಮಾರಸ್ವಾಮಿ, ಮಂಜುನಾಥ್, ನಾಗೇಶ್, ರವೀಂದ್ರ, ನಾಗೇಶ್ ಮತ್ತಿತರರಿದ್ದರು.